ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ತಲಾ 4 ಕೋಟಿ ರೂಪಾಯಿ ವೆಚ್ಚದಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊಸದಾಗಿ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರ ಘಟಕಗಳಿಗೆ 40 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನಿಕ ಉಪಕರಣಗಳ ಖರೀದಿ ಪ್ರಸ್ತಾವನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಪಶು ವೈದ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮತ್ತು ಬೆಳಗಾವಿಯ ಅಥಣಿಯ ಪಶು ವೈದ್ಯಕೀಯ ಕಾಲೇಜುಗಳಿಗೆ ಭಾರತೀಯ ಪಶು ವೈದ್ಯಕೀಯ ಪರಿಷತ್ ಮಾರ್ಗಸೂಚಿಯಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಒಟ್ಟು 245 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸಲು ವಿಶೇಷವಾಗಿ ಅಗ್ರೀಬಯೋಟೆಕ್ ನಲ್ಲಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು 67.50 ಕೋಟಿ ವೆಚ್ಚದಲ್ಲಿ ಅಗ್ರಿ ಇನ್ನೋವೇಷನ್ ಸೆಂಟರ್ ಸ್ಥಾಪನೆಗೆ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.