ಬೆಂಗಳೂರು: ದತ್ತ ಪಾದುಕೆಗಳಿಗೆ ಹಿಂದೂ ಅರ್ಚಕರಿಂದಲೇ ಪೂಜೆಗೆ ಅವಕಾಶ ನೀಡಬೇಕೆಂಬುದರ ಕುರಿತಾಗಿ ಸಂಪುಟ ಉಪಸಮಿತಿ ಸಿದ್ಧಪಡಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದತ್ತಪೀಠ ವರದಿಗೆ ಒಪ್ಪಿಗೆ ನೀಡಿರುವುದಾಗಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಬಾಬಾ ಬುಡನ್ ಗಿರಿ ಗುರು ದತ್ತಾತ್ರೇಯ ಪೀಠದಲ್ಲಿ ಪಾದುಕೆಗಳಿಗೆ ಪೂಜೆ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಸಂಪುಟ ಉಪ ಸಮಿತಿ ವರದಿ ಸಿದ್ದಪಡಿಸಿದೆ. ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುವುದರಿಂದ ವರದಿಯಲ್ಲಿರುವ ಮಾಹಿತಿಯನ್ನು ಬಹಿರಂಗ ಪಡಿಸಲಾಗಿಲ್ಲ.
ದತ್ತ ಪಾದುಕೆಗಳಿಗೆ ಹಿಂದೂ ಅರ್ಚಕರಿಂದ ಪೂಜೆಗೆ ಅವಕಾಶ ಕಲ್ಪಿಸಬೇಕು ಎನ್ನುವುದು ಎಂದು ಹಿಂದೂಪರ ಸಂಘಟನೆಗಳ ವಾದವಾಗಿದೆ. ಈ ಸಂಬಂಧ ಸರ್ಕಾರ ಸಚಿವ ಸಂಪುಟ ಉಪ ಸಮಿತಿ ರಚಿಸಿತ್ತು. ಹಿಂದೂ ಅರ್ಚಕರಿಂದಲೇ ದತ್ತಾತ್ರೆಯ ಪಾದುಕೆಗಳಿಗೆ ಪೂಜೆಗೆ ಅವಕಾಶ ಕಲ್ಪಿಸಲು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.