ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಮೀಸಲಾತಿ ವಿಚಾರದ ಕುರಿತಾಗಿ ಅನೌಪಚಾರಿಕವಾಗಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸಂಪುಟ ಸಹೋದ್ಯೋಗಿಗಳಿಗೆ ಮೀಸಲಾತಿ ಕುರಿತು ಬಹಿರಂಗವಾಗಿ ಚರ್ಚಿಸದಂತೆ ಸೂಚನೆ ನೀಡಿದ್ದಾರೆ. ಯಾರು ಕೂಡ ಮೀಸಲಾತಿ ಬಗ್ಗೆ ಮಾತನಾಡಬಾರದು ಎಂದು ತಿಳಿಸಿದ್ದಾರೆ. ಸ್ವಾಮೀಜಿಗಳ ಮನವೊಲಿಸುವಂತೆ ಸಚಿವರಿಗೆ ಸಿಎಂ ತಿಳಿಸಿದ್ದು, ಈ ಕುರಿತಾಗಿ ವರಿಷ್ಠರೊಂದಿಗೆ ಚರ್ಚೆ ನಡೆಸೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಹಿರಿಯ ಅಧಿಕಾರಿಗಳು ತೆರಳಿದ ನಂತರ ಸಿಎಂ ಸಂಪುಟ ಸಹೋದ್ಯೋಗಿಗಳೊಂದಿಗೆ ಮೀಸಲಾತಿ ವಿಚಾರವಾಗಿ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.