ಬೆಂಗಳೂರು: ಮುಡಾ ಹಗರಣ ಗದ್ದಲದಲ್ಲಿ ವಿಧಾನ ಮಂಡಲ ಅಧಿವೇಶನ ನಿಗದಿಗಿಂತ ಒಂದು ದಿನ ಮೊದಲೇ ಮುಕ್ತಾಯವಾಗಿದೆ. ವಿಪಕ್ಷಗಳು ಸದನದ ಹೊರಗೆ ಹೋರಾಟದ ಕಾರ್ಯತಂತ್ರ ಹೆಣೆದಿದ್ದು, ಈ ಬೆಳವಣಿಗೆ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಸಂಪುಟ ಸಭೆ ಗಮನ ಸೆಳೆದಿದೆ.
ಅಧಿವೇಶನ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ದಿಢೀರ್ ನಿಗದಿಯಾಗಿರುವ ಸಂಪುಟ ಸಭೆ ಕುತೂಹಲ ಮೂಡಿಸಿದೆ. ಕಳೆದ ಸೋಮವಾರ ಸಂಪುಟ ಸಭೆ ನಡೆದಿತ್ತು. ನಾಲ್ಕು ದಿನಗಳ ಅಂತರದಲ್ಲೇ ಮತ್ತೊಮ್ಮೆ ಸಂಪುಟ ಸಭೆ ನಿಗದಿಯಾಗಿದೆ.
ಮುಡಾ ಹಗರಣ, ವಾಲ್ಮೀಕಿ ನಿಗಮದ ಅಕ್ರಮ ಬೆಳವಣಿಗೆಗಳ ಕುರಿತಂತೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಿಯು ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ತಿದ್ದುಪಡಿಯ ಅನುಮೋದನೆ, ಅನಿಮೇಶನ್ ವಿಶ್ಯುಯಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಯ ಪ್ರಸ್ತಾವನೆ ಸೇರಿ ಕೆಲವು ವಿಷಯಗಳು ಸಂಪುಟ ಸಭೆಯ ಕಾರ್ಯ ಸೂಚಿಯಲ್ಲಿವೆ.