
ಬೆಂಗಳೂರು: 2,000 ಕೋಟಿ ರೂ. ಅಂದಾಜು ಮೊತ್ತದಲ್ಲಿ ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯನ್ನು ಶೇ 7.5 ರಾಜ್ಯ ಸರ್ಕಾರ, ಶೇ 7.5 ಮಹಾನಗರ ಪಾಲಿಕೆ ಸಂಪನ್ಮೂಲ ಹಾಗೂ ಇನ್ನುಳಿದ ಶೇ 85 ಯುಐಡಿಎಫ್‌ನಿಂದ ಸಾಲದ ರೂಪದಲ್ಲಿ ಪಡೆದು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ.
ಬಾಗಲಕೋಟೆಯ ಮುಧೋಳ ತಾಲ್ಲೂಕಿನ ರನ್ನನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖನೆಯನ್ನು 30 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಅನುಮೋದನೆ ನೀಡಲಾಗಿದೆ.
ಸಮುದಾಯ ಭವನ ನಿರ್ಮಾಣಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮಾವಿನಕೆರೆ ಗ್ರಾಮದಲ್ಲಿ 20 ಗುಂಟೆ ಜಮೀನು ಮಂಜೂರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.
ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಉತ್ತೇಜಿಸಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವೇಣೂರು ಗ್ರಾಮದಲ್ಲಿ 14 ಸೆಂಟ್ ಜಮೀನು ಮಂಜೂರಿಗೆ ಒಪ್ಪಿಗೆ ನೀಡಲಾಗಿದೆ.
363.82 ಕೋಟಿ ವೆಚ್ಚದಲ್ಲಿ ಬಿಎಂಟಿಸಿಗೆ 840 ಹೊಸ ಬಸ್ ಖರೀದಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಬಸ್ ಘಟಕ ನಿರ್ಮಾಣಕ್ಕೆ ಉಚಿತವಾಗಿ 5 ಎಕರೆ ಜಮೀನು ಮಂಜೂರಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
84.58 ಕೋಟಿ ವೆಚ್ಚದಲ್ಲಿ ಅಡುಗೆ ಮನೆ ಸಹಿತ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಮೆನುವಿನಂತೆ ಕಾರ್ಯನಿರ್ವಹಿಸಲು ಅಗತ್ಯ ಪೀಠೋಪಕರಣ ಹಾಗೂ ಸಲಕರಣೆ ಸಾಮಗ್ರಿಗಳನ್ನು ಖರೀದಿಸಲಾಗುವುದು. 5ನೇ ರಾಜ್ಯ ಹಣಕಾಸು ಆಯೋಗದ ಅವಧಿ 28ನೇ ಫೆಬ್ರವರಿ 2025ರವರೆಗೆ ವಿಸ್ತರಣೆ ಮಾಡಲಾಗುವುದು.
256.15 ಕೋಟಿ ವೆಚ್ಚದಲ್ಲಿ ಆನೇಕಲ್, ಹೊಸಕೋಟೆ, ಖಾನಾಪುರ, ನೆಲಮಂಗಲ, ಶಿರಹಟ್ಟಿ, ಶೃಂಗೇರಿ, ಯಳಂದೂರು ತಾಲ್ಲೂಕುಗಳಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
53.66 ಕೋಟಿ ವೆಚ್ಚದಲ್ಲಿ 563 ನಮ್ಮ ಕ್ಲಿನಿಕ್‌ಗಳ ಪ್ರಯೋಗಾಲಯಗಳನ್ನು ಬಲಪಡಿಸಲು ಅಗತ್ಯ ಔಷಧಿ ಹಾಗೂ ಉಪಕರಣಗಳ ಖರೀದಿಗೆ, ಗ್ರಾಮೀಣ ಪ್ರದೇಶದ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ವಿವಿಧ ವೃಂದದ 158 ಹುದ್ದೆಗಳನ್ನು ಸೃಜಿಸಲು ಅನುಮೋದನೆ ನೀಡಲಾಗಿದೆ.
30 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಟ್ಟಡ ಮೇಲ್ದರ್ಜೆಗೇರಿಸಲು ಹಾಗೂ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಕೊಪ್ಪಳ ಜಿಲ್ಲೆಯ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ 2ನೇ ಹಂತದ ಕಾಮಗಾರಿಗೆ ಪರಿಷ್ಕೃತ ಮೊತ್ತ 59.32 ಕೋಟಿ ರೂ.ಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.