
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆಯ ಬದಲಾಗಿ 5 ಕೆ.ಜಿ ಅಕ್ಕಿ ವಿತರಿಸಲು ನೀಡಿರುವ ಆದೇಶಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ವಿವಿಧ ನಿರ್ಧಾರಗಳ ಕುರಿತಾಗಿ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ಯೋಜನೆಯಡಿ ನೇರ ನಗದು ವರ್ಗಾವಣೆಯ ಬದಲಾಗಿ 5 ಕೆ.ಜಿ ಅಕ್ಕಿ ವಿತರಿಸಲು ನೀಡಿರುವ ಆಹಾರ ಇಲಾಖೆಯ ಆದೇಶಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಮಾರ್ಚ್ 3ರಿಂದ ಉಭಯ ಸದನಗಳ ವಿಧಾನ ಮಂಡಲ ಜಂಟಿ ಅಧಿವೇಶನ ನಡೆಯಲಿದೆ. ಅಧಿವೇಶನ ನಡೆಸಲು ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ನವೋದ್ಯಮಗಳಿಗೆ 75 ಕೋಟಿ ರೂಪಾಯಿ ಮೊತ್ತದಲ್ಲಿ ಕ್ಲಸ್ಟರ್ ಸೀಡ್ ಫಂಡ್ ಸ್ಥಾಪನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಣಾವರ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
5 ಪ್ರಮುಖ ವಿಧೇಯಕಗಳಿಗೆ ಅನುಮೋದನೆ ನೀಡಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ವಿಧೇಯಕ
ಕರ್ನಾಟಕ ಅಧಿಕ ಬಡ್ಡಿ ನಿಷೇಧ ತಿದ್ದುಪಡಿ ವಿಧೇಯಕ 2025
ಕರ್ನಾಟಕ ಗಿರಿವಿದಾರರ ತಿದ್ದುಪಡಿ ವಿಧೇಯಕ 2025
ಕರ್ನಾಟಕ ಲೇವಾದೇವಿದಾರರ ತಿದ್ದುಪಡಿ ವಿಧೇಯಕ 2025
ಕರ್ನಾಟಕ ನಾಗರೀಕ ಸೇವಾ ನೇರ ನೇಮಕಾತಿ ನಿಯಮಗಳ ತಿದ್ದುಪಡಿ ಬಿಲ್
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಪಾಲಿಕೆಯ ಜಾಗ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.