ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಲೋಕೋಪಯೋಗಿ ಇಲಾಖೆಯಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಪಿಪಿಪಿ ಯೋಜನೆ ಅಡಿ ಅನುಷ್ಠಾನ ಮಾಡುವ ಕಾಮಗಾರಿಗಳಿಗೆ ಮಾತ್ರ ಅನ್ವಯವಾಗುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಪ್ರಾಧಿಕಾರ ರಾಜ್ಯದ ಪ್ರಮುಖ ರಸ್ತೆಗಳ ಅಭಿವೃದ್ಧಿ ಯೋಜನೆಯ ಆದ್ಯತಾ ಪಟ್ಟಿಗಳನ್ನು ರಚಿಸಲಿದ್ದು, ಅಂತರ ರಾಜ್ಯ ಸಂಪರ್ಕಿಸುವ ಹೆದ್ದಾರಿ. ಕೈಗಾರಿಕಾ ಕಾರಿಡಾರ್, ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಯೋಜನಾ ವರದಿ, ಕಾರ್ಯಸಾಧ್ಯತೆ ವರದಿ ತಯಾರಿ, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಖಾಸಗಿ ಬಂಡವಾಳ ಆಕರ್ಷಣೆ ಮಾಡಲು ಸೂಕ್ತ ಯೋಜನೆ ರಚನೆ, ತಾಂತ್ರಿಕ ಅನುಮೋದನೆ ನೀಡಲಿದೆ. ಪಿಪಿಪಿ ಗುತ್ತಿಗೆ ಸಂಗ್ರಹಣೆ ಪ್ರಕ್ರಿಯೆ, ಪಾರದರ್ಶಕವಾಗಿ ಅತ್ಯುತ್ತಮ ಮಾನದಂಡಗಳಿಗೆ ಅನುಗುಣವಾಗಿ ಮಾರ್ಗಸೂಚಿ ವಿಧಾನ ರಚಿಸಲಿದೆ ಎಂದು ಹೇಳಲಾಗಿದೆ.