ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳಮಿಸಲಾತಿ ಕಲ್ಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಅಗತ್ಯ ದತ್ತಾಂಶ ಸಂಗ್ರಹಣೆ ಬಗ್ಗೆ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್ಸಿ ವರ್ಗದ ಬಹುದೊಡ್ಡ ಬೇಡಿಕೆ ಒಳ ಮೀಸಲಾತಿ ಜಾರಿ ಸಂಬಂಧ ಒಪ್ಪಿಗೆ ನೀಡಲಾಗಿದೆ. ದತ್ತಾಂಶ ಸಂಗ್ರಹಕ್ಕೆ ಆಯೋಗ ರಚನೆ ಮಾಡಲಿದ್ದು, ಮೂರು ತಿಂಗಳ ಒಳಗಾಗಿ ಪ್ರಾಯೋಗಿಕ ದತ್ತಾಂಶ ವರದಿ ನೀಡಬೇಕು.
ವರದಿ ಬರುವವರೆಗೆ ಇನ್ನು ಮುಂದೆ ಹೊಸದಾಗಿ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂದು ನೇಮಕಾತಿಗಳಿಗೆ ತಡೆ ನೀಡಲಾಗಿದೆ. ಈ ಮೂಲಕ ಮೂರು ದಶಕಗಳ ಒಳ ಮೀಸಲಾತಿ ಹೋರಾಟಕ್ಕೆ ಕೊನೆಗೂ ಸ್ಪಂದನೆ ವ್ಯಕ್ತವಾಗಿದ್ದು, ಒಳ ಮೀಸಲಾತಿ ಜಾರಿ ನಿರ್ಣಾಯಕ ಹಂತ ತಲುಪಿದೆ.