ಬೆಂಗಳೂರು: ಇನ್ನೇನು ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗಲಿದೆ. ಹಲವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಪುನಾರಚನೆಯಾದಲ್ಲಿ ಕೆಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುವುದು ಎನ್ನಲಾಗಿದೆ.
ಕಳೆದ ವಾರ ಸಂಪುಟ ವಿಸ್ತರಣೆ ಕುರಿತಾಗಿ ಬಿರುಸಿನ ಚಟುವಟಿಕೆ ನಡೆದಿದ್ದವು. ಅನೇಕ ಶಾಸಕರು ಸಿಎಂ ಭೇಟಿಯಾಗಿದ್ದರು. ತಾವೂ ಆಕಾಂಕ್ಷಿಗಳಾಗಿದ್ದು ತಮ್ಮನ್ನು ಪರಿಗಣಿಸಬೇಕೆಂದು ಹೇಳಿದ್ದರು.
ಇನ್ನು ಎರಡು-ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ತಿಳಿಸಿದ್ದರು. ಆದರೆ, ಎರಡು ಮೂರು ದಿನ ಕಳೆದರೂ ಸಚಿವ ಸಂಪುಟ ವಿಸ್ತರಣೆ ಆಗದಿರುವುದು ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ, ಆತಂಕ ಮೂಡಿಸಿದೆ.
ಕಳೆದ ವಾರ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದ ಯಡಿಯೂರಪ್ಪ ಅವರು, ಸಂಪುಟ ವಿಸ್ತರಣೆಗೆ ವರಿಷ್ಠರು ಅನುಮತಿ ನೀಡಲಿದ್ದು ಒಪ್ಪಿಗೆ ದೊರೆತ ಕೂಡಲೇ ಸಂಪುಟ ವಿಸ್ತರಣೆ ಮಾಡಲಾಗುವುದು. ಇನ್ನು ಎರಡು ಮೂರು ದಿನದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ, ಬಿಜೆಪಿ ವರಿಷ್ಠರು ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿಲ್ಲ. ಸಚಿವ ಸಂಪುಟ ವಿಸ್ತರಿಸಬೇಕೆ ಅಥವಾ ಪುನಾರಚನೆ ಮಾಡಬೇಕೆ ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸಿದ್ದಾರೆ. ಡಿಸೆಂಬರ್ 7 ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗಬಹುದು. ವರಿಷ್ಠರು ಒಪ್ಪಿಗೆ ಸೂಚಿಸಿದರೆ ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನಲಾಗಿದೆ.