ಬೆಂಗಳೂರು: ಸರ್ಕಾರದ ಸಚಿವರು, ಶಾಸಕರುಗಳ ನಡುವೆಯೇ ಅಸಮಾಧಾನ, ಮುಖ್ಯಮಂತ್ರಿಗಳಿಗೆ ದೂರು ಈ ಎಲ್ಲಾ ಬೆಳವಣಿಗಗಳ ನಡುವೆ ಇದೀಗ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಸಚಿವ ಸಂಪುಟ ಬದಲಾವಣೆ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಪಟ್ಟಣ್, ಸಚಿವ ಸಪುಟ ಬದಲಾವಣೆ ಮಾಡುವ ಪ್ರಸ್ತಾಪವಿದೆ. ಎರಡೂವರೆ ವರ್ಷದ ಬಳಿಕ ಸಂಪುಟ ಬದಲಾವಣೆಯಾಗಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್ ನೀಡಿರುವ ಈ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನಾನೂ ಕೂಡ ಮಂತ್ರಿಯಾಗಬೇಕಿತ್ತು. ಹಿರಿಯ ಶಾಸಕನಿದ್ದೇನೆ. ಆದರೆ ಜಾತಿ ನೋಡಿ ಮಂತ್ರಿ ಮಾಡಿದ್ದರಿಂದ ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಅನುಭವ ನೋಡಿ ಮಂತ್ರಿ ಮಾಡುವಂತೆ ನಾನು ಅನವಿ ಮಾಡಿದ್ದೇನೆ ಎಂದಿದ್ದಾರೆ.
ಎರಡೂವರೆ ವರ್ಷದ ಬಳಿಕ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಸಂಪುಟ ಪುನಾರಚನೆ ಮಾಡ್ತಾರೋ ಅಥವಾ ನಾಲ್ಕೈದು ಸ್ಥಾನ ಮಾತ್ರ ಬದಲಾಯಿಸುತ್ತಾರೋ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಜ್ಯೂನಿಯರ್, ಸೀನಿಯರ್ ಅಂತ ಇಲ್ಲ. ಪಕ್ಷಕ್ಕೆ ಸೇರಿದ ಮೇಲೆ ಎಲ್ಲರೂ ಒಂದೇ ಅದೃಷ್ಟ ಇದ್ದವರು ಮಂತ್ರಿ ಆಗ್ತಾರೆ. ದುರಾದೃಷ್ಟವಿರುವ ನಮ್ಮನಂತವರು ಹೀಗೆ ಮಾತಾಡುತ್ತಾರೆ. ಯಾವುದೇ ಫೀಲ್ಡ್ ಆದರು ಗಾಡ್ ಫಾದರ್ ಇರಬೇಕು. ಗಾಡ್ ಫಾದರ್ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಮುಖ್ಯಮಂತ್ರಿ ಬದಲಾವಣೆಯೂ ಆಗುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅದೆಲ್ಲ ದೊಡ್ಡ ಕೆಲಸ. ಸಿಎಂ ಸ್ಥಾನದ ಬಗ್ಗೆ ನಾವು ಮಾತನಾಡಲು ಆಗಲ್ಲ. ಅದೆಲ್ಲ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಹೇಳಿದ್ದಾರೆ.