ನವದೆಹಲಿ: ಎಲ್ಲರಿಗೂ ಆಧಾರ್ ಮಾದರಿ ವಿಶಿಷ್ಟ ಆರೋಗ್ಯ ಸಂಖ್ಯೆ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. 1600 ಕೋಟಿ ರೂಪಾಯಿ ಮೊತ್ತದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆ ಜಾರಿಗೆ ಸಂಪುಟ ಸಭೆ ಅನುಮೋದನೆ ನೀಡಿದ್ದು, ದೇಶಾದ್ಯಂತ ಆರೋಗ್ಯ ಯೋಜನೆ ಜಾರಿಯಾಗಲಿದೆ.
ದೇಶದ ಎಲ್ಲರಿಗೂ ವಿಶಿಷ್ಟ ಆರೋಗ್ಯ ಸಂಖ್ಯೆ ನೀಡಲಾಗುವುದು. ಸಮಸ್ತ ಆರೋಗ್ಯ ವಿವರ ಇದರಲ್ಲಿ ಅಡಕವಾಗಿರುತ್ತದೆ. ಇದರಿಂದ ಚಿಕಿತ್ಸೆ ನೀಡಲು ಸುಲಭವಾಗುತ್ತದೆ.
ದೇಶದ ಪ್ರತಿಯೊಬ್ಬರಿಗೂ ಆಧಾರ್ ಮಾದರಿಯಲ್ಲಿ ವಿಶಿಷ್ಟ ಡಿಜಿಟಲ್ ಗುರುತಿನ ಚೀಟಿ ನೀಡಲಿದ್ದು, ಈ ಕಾರ್ಡ್ ನಲ್ಲಿ ವ್ಯಕ್ತಿಯ ಆರೋಗ್ಯ ಮಾಹಿತಿ, ಈ ಹಿಂದಿನ ರೋಗ, ಅನಾರೋಗ್ಯದ ವಿಸ್ತೃತ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಹಿಂದೆ ಪಡೆದ ಚಿಕಿತ್ಸೆ, ಭೇಟಿ ಮಾಡಿದ ವೈದ್ಯರು, ಆಸ್ಪತ್ರೆ, ವೈದ್ಯಕೀಯ ವರದಿಗಳು ಕೂಡ ಇದರಲ್ಲಿ ಲಭ್ಯವಾಗಿರುತ್ತದೆ.
ಈ ಯೋಜನೆಯಿಂದ ಜನರು ಪ್ರತಿ ಬಾರಿ ವೈದ್ಯರ ಬಳಿಗೆ ಹೋಗುವಾಗ ಪರೀಕ್ಷೆಗಳ ಮಾಹಿತಿಯನ್ನು ತೆಗೆದುಕೊಂಡು ಹೋಗಬೇಕಿಲ್ಲ. ಒಂದು ಕಡೆ ಚಿಕಿತ್ಸೆ ಪಡೆದವರು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಸುಲಭವಾಗುತ್ತದೆ. ಎಲ್ಲ ಮಾಹಿತಿಗಳು ಕಂಪ್ಯೂಟರ್ ಮತ್ತು ಅಪ್ ನಲ್ಲಿ ಇರಲಿದ್ದು, ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಪ್ರಾಯೋಗಿಕವಾಗಿ ಹಲವೆಡೆ ಜಾರಿಯಲ್ಲಿರುವ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.