ನವದೆಹಲಿ: ಪಶು ಸಂಗೋಪನೆ ಮೂಲ ಸೌಕರ್ಯ ನಿಧಿಯನ್ನು ಮುಂದುವರಿಸುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮುಂದಿನ ಮೂರು ವರ್ಷಗಳವರೆಗೆ ಪಶು ಸಂಗೋಪನೆ ನಿಧಿಗೆ 29,610 ಕೋಟಿ ರೂ. ನಿಗದಿ ಮಾಡಲಾಗಿದೆ. ಡೇರಿ ಸಂಸ್ಕರಣೆ, ಮಾಂಸ ಸಂಸ್ಕರಣೆ, ಪಶು ಆಹಾರ ಸಂಸ್ಕರಣೆ ,ಉತ್ಪನ್ನ ವೈವಿಧ್ಯೀಕರಣ, ತಳಿ ವೃದ್ಧಿ ಘಟಕಗಳು, ಪ್ರಾಣಿಗಳ ತ್ಯಾಜ್ಯದಿಂದ ಸಂಪತ್ತು ವೃದ್ಧಿ, ಪಶು ಲಸಿಕೆ, ಔಷಧ ಉತ್ಪಾದನೆ ಸೌಲಭ್ಯಗಳಿಗೆ ಹೂಡಿಕೆ ಪ್ರೋತ್ಸಾಹಿಸಲಿದೆ.
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ, ನಬಾರ್ಡ್, ಎನ್.ಡಿ.ಡಿ.ಬಿ., ಶೆಡ್ಯೂಲ್ ಬ್ಯಾಂಕ್ ನಿಂದ ಶೇಕಡ 90 ರಷ್ಟು ಸಾಲಕ್ಕೆ 8 ವರ್ಷಗಳವರೆಗೆ ಶೇಕಡ 3ರ ಬಡ್ಡಿ ಸಹಾಯಧನ ನೀಡಲಾಗುತ್ತದೆ. ಹಾಲು ಉತ್ಪಾದಕ ಸಹಕಾರ ಸಂಸ್ಥೆಗಳ ಡೈರಿ ಘಟಕಗಳ ಆಧುನಿಕರಣಕ್ಕೆ ಇದರಿಂದ ಅನುಕೂಲವಾಗುತ್ತದೆ. ಎಂಎಸ್ಎಂಇ ಮತ್ತು ಹೈನುಗಾರಿಕೆ ಸಹಕಾರಿಗಳಿಗೆ ಕೇಂದ್ರ ಸರ್ಕಾರ ಸಾಲದ ಮೇಲೆ ಖಾತ್ರಿ ನೀಡಲಿದೆ. ಯೋಜನೆಯಿಂದ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯಮಶೀಲತೆ ಮೂಲಕ 35 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. ಈಗಾಗಲೇ ಯೋಜನೆಯಿಂದ 15 ಲಕ್ಷ ರೈತರಿಗೆ ಪ್ರತ್ಯಕ್ಷ ಪರೋಕ್ಷವಾಗಿ ಅನುಕೂಲವಾಗಿದೆ ಎಂದು ಹೇಳಲಾಗಿದೆ.