ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಟೆಲಿಕಾಂ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಪರಿಹಾರ ಪ್ಯಾಕೇಜ್ ಘೋಷಣೆ ಮಾಡಲು ಅನುಮೋದನೆ ನೀಡಿದೆ. ಇದರಿಂದ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದ ಸಾಕಷ್ಟು ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಈ ಪರಿಹಾರ ಪ್ಯಾಕೇಜ್ನ ಭಾಗವಾಗಿ ಟೆಲಿಕಾಂ ಕಂಪನಿಗಳ ವರಮಾನ ಬಾಕಿ ಮೊತ್ತದ ಪಾವತಿಯ ಮೊರಟೋರಿಯಂ ಕೂಡ ಒಳಗೊಳ್ಳಲಿದೆ. ಹಾಗೂ ಸ್ವಯಂ ಚಾಲಿತ ಮಾರ್ಗದ ಮೂಲಕ 100 ಪ್ರತಿಶತ ವಿದೇಶಿ ಹೂಡಿಕೆಯನ್ನು ಅನುಮತಿಸಲಾಗಿದೆ.
ಕೇಂದ್ರ ಸಂಪುಟ ಕೈಗೊಂಡ ನಿರ್ಧಾರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್, ಟೆಲಿಕಾಂ ವಲಯಗಳಿಗೆ 9 ರಚನಾತ್ಮಕ ಸುಧಾರಣೆಗಳನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ರು. ಎಜಿಆರ್ ಬಾಕಿ ಉಳಿಸಿಕೊಂಡಿರುವ ಸಾಕಷ್ಟು ಕಂಪನಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಏರ್ಟೆಲ್, ವೋಡಾಫೋನ್ನಂತಹ ಟೆಲಿಕಾಂ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು ಎಜಿಆರ್ನ್ನು ಕಂತಿನ ರೂಪದಲ್ಲಿ ಪಾವತಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದರೆ ಸಂಪುಟ ಸಭೆಯಲ್ಲಿ 4 ವರ್ಷಗಳ ಮೊರಟೋರಿಯಂಗೆ ಅನುಮತಿ ನೀಡಲಾಗಿದೆ ಎನ್ನಲಾಗಿದೆ.