ನವದೆಹಲಿ: ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್(ಪಿ & ಕೆ) ರಸಗೊಬ್ಬರಗಳಿಗೆ 24,420 ಕೋಟಿ ರೂ. ಸಬ್ಸಿಡಿ ನೀಡಲು ಸರ್ಕಾರ ಗುರುವಾರ ಅನುಮೋದನೆ ನೀಡಿದೆ.
ರೈತರಿಗೆ ಅನುಕೂಲ ಕಲ್ಪಿಸಲು, ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಉತ್ಪಾದಕತೆ ಹೆಚ್ಚಿಸಲು ಮೂರು ಹೊಸ ಶ್ರೇಣಿಗಳನ್ನು ಸೇರಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2024-25 ರ ಖಾರಿಫ್ ಬಿತ್ತನೆ ಋತುವಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ(ಎನ್‌ಬಿಎಸ್) ದರಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ. ಇದು ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ನಡೆಯುತ್ತದೆ ಎಂದು ತಿಳಿಸಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದರೂ, ಕಳೆದ ಋತುವಿನ ಬೆಲೆಯಂತೆಯೇ ಇರಿಸಲು ನಾವು ನಿರ್ಧರಿಸಿದ್ದೇವೆ ಎಂದು ಸಚಿವ ಅನುರಾಗ್ ಠಾಕೂರ್ ಕ್ಯಾಬಿನೆಟ್ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಾರಜನಕ(ಎನ್) ಪ್ರತಿ ಕೆಜಿಗೆ 47.02 ರೂ., ಫಾಸ್ಫೇಟಿಕ್(ಪಿ) ಪ್ರತಿ ಕೆಜಿಗೆ 28.72 ರೂ., ಪೊಟ್ಯಾಸಿಕ್(ಕೆ) ಪ್ರತಿ ಕೆಜಿಗೆ 2.38 ರೂ.ಮತ್ತು ಸಲ್ಫರ್(ಎಸ್) ಪ್ರತಿ ಕೆಜಿಗೆ 1.89 ರೂ. ಖಾರಿಫ್ ಋತುವಿಗೆ ಸಬ್ಸಿಡಿ ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಫಾಸ್ಫೇಟಿಕ್ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 2023 ರ ರಾಬಿ ಋತುವಿನಲ್ಲಿ ಕೆಜಿಗೆ 20.82 ರೂ.ನಿಂದ 2024 ರ ಖಾರಿಫ್ ಹಂಗಾಮಿಗೆ 28.72 ರೂ.ಗೆ ಹೆಚ್ಚಿಸಲಾಗಿದೆ. ಆದಾಗ್ಯೂ, ಸಾರಜನಕ(ಎನ್), ಪೊಟ್ಯಾಸಿಕ್(ಕೆ) ಮತ್ತು ಸಲ್ಫರ್(ಎಸ್) ಮೇಲಿನ ಸಬ್ಸಿಡಿಯನ್ನು 2024 ರ ಖಾರಿಫ್ ಋತುವಿಗೆ ಬದಲಾಗದೆ ಇರಿಸಲಾಗಿದೆ.
ಡಿ-ಅಮೋನಿಯಂ ಫಾಸ್ಫೇಟ್(ಡಿಎಪಿ) ಮೇಲಿನ ಸಬ್ಸಿಡಿ ಪ್ರತಿ ಟನ್‌ಗೆ 4,500 ರೂ.ರಂತೆ ಮುಂದುವರಿಯುತ್ತದೆ.
ಡಿಎಪಿ ಆಧಾರಿತ ರಸಗೊಬ್ಬರಗಳು ಪ್ರತಿ ಚೀಲಕ್ಕೆ 1,350 ರೂ.ಗೆ ಲಭ್ಯವಿದ್ದರೆ, ಮ್ಯೂರಿಯೇಟ್ ಆಫ್ ಫಾಸ್ಫೇಟ್(ಎಂಒಪಿ) ರಸಗೊಬ್ಬರಗಳು ಚೀಲಕ್ಕೆ 1,670 ರೂ.ಮತ್ತು ಎನ್‌ಪಿಕೆ(ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್) ಪ್ರತಿ ಚೀಲಕ್ಕೆ 1,470 ರೂ.ಗೆ ಲಭ್ಯವಿರುತ್ತದೆ.
2023-24ರ ಖಾರಿಫ್ ಹಂಗಾಮಿಗೆ 38,000 ಕೋಟಿ ರೂ. ಸಬ್ಸಿಡಿ ಘೋಷಿಸಲಾಗಿದೆ.
2024-25ರ ಹಣಕಾಸು ವರ್ಷದ (FY25) ಕೇಂದ್ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ 1.64 ಟ್ರಿಲಿಯನ್ ರೂ.ಗಳನ್ನು ಮೀಸಲಿಡಲಾಗಿದೆ, ಇದು FY24 ಕ್ಕೆ ನಿಗದಿಪಡಿಸಿದ 1.88 ಟ್ರಿಲಿಯನ್ ರೂ.ಗಳ ಪರಿಷ್ಕೃತ ಅಂದಾಜಿಗಿಂತ ಕಡಿಮೆಯಾಗಿದೆ.