ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ -ಸಿಎ ಪರೀಕ್ಷೆಯನ್ನು ಮುಂದೂಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಈ ಕುರಿತಾಗಿ 27 ಪರೀಕ್ಷಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಸೋಮವಾರ ಹೈಕೋರ್ಟ್ ವಜಾಗೊಳಿಸಿದೆ.
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ನಡೆಸುವ ಮಧ್ಯಂತರ ಮತ್ತು ಅಂತಿಮ ಪರೀಕ್ಷೆಗಳನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡುವಂತೆ ಕೋರಿ ಸಿಎ ಪರೀಕ್ಷಾ ಅಭ್ಯರ್ಥಿಗಳು ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಚುನಾವಣೆ ಸಮಯದಲ್ಲಿ ಯಾವುದೇ ಪರೀಕ್ಷೆಗಳನ್ನು ನಡೆಸಬಾರದು ಎಂಬ ನಿಯಮಗಳಿಲ್ಲ ಎಂದು ತಿಳಿಸಿದೆ. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಐಸಿಎಐ ಒಂದು ಬಾರಿ ವೇಳಾಪಟ್ಟಿ ಪರಿಷ್ಕರಿಸಿದೆ.
ಮೇ 3, 5 ಮತ್ತು 9ರಂದು ಗ್ರೂಪ್ 1ರ ಇಂಟರ್ ಮೀಡಿಯೇಟ್ ಕೋರ್ಸ್ ಪರೀಕ್ಷೆ ನಡೆಯಲಿದೆ. ಗ್ರೂಪ್ 2ರ ಪರೀಕ್ಷೆ ಮೇ 11, 15, 17ರಂದು ನಡೆಯಲಿದೆ. ಅಂತಿಮ ಪರೀಕ್ಷೆಗಳ ಪೈಕಿ ಗ್ರೂಪ್ 1ರ ಪರೀಕ್ಷೆ ಮೇ 2, 4, 8ರಂದು ನಡೆಯಲಿದೆ. ಗ್ರೂಪ್ 2ರ ಅಂತಿಮ ಪರೀಕ್ಷೆ ಮೇ 10, 14 ಮತ್ತು 16ರಂದು ನಡೆಸಲಾಗುವುದು.