ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಎಂಎಲ್ ಸಿ ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ಆರೋಪ ಹಾಗೂ ಹೆಬ್ಬಾಳಕರ್ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣದ ಬೆನ್ನಲ್ಲೇ ಬೆಳಗಾವಿ ಸುವರ್ಣಸೌಧದಲ್ಲಿ ಭಾರಿ ಹೈಡ್ರಾಮಾ ನಡೆದಿದೆ.
ಎಂಎಲ್ ಸಿ ಸಿ.ಟಿ.ರವಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರ ವಿರುದ್ಧ ಸುವರ್ಣ ಸೌಧ ಕಾರಿಡಾರ್ ನಲ್ಲಿ ಧರಣಿ ಕುಳಿತಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುವರ್ಣಸೌಧದ ಕಾರಿಡಾರ್ ಹೊರಭಾಗದಲ್ಲಿ ಒಂದೆಡೆ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಕಾರಿಡಾರ್ ನಲ್ಲಿ ಸಿ.ಟಿ.ರವಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ನಾನು ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ತೆರಳಲು ಸುವರ್ಣಸೌಧದ ಮೊಗಸಾಲೆಯಲ್ಲಿ ಹೋಗುತ್ತಿದ್ದ ವೇಳೆ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸಚಿವರ ಹೆಸರು ಹೇಳಿ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ವಿಧಾನಸೌಧದಲ್ಲಿ ಶಾಸಕನಿಗೇ ರಕ್ಷಣೆ ಇಲ್ಲ ಎಂದ ಮೇಲೆ ಜನಸಾಮಾನ್ಯರನ್ನು ಈ ಸರ್ಕಾರ ಹೇಗೆ ರಕ್ಷಿಸುತ್ತದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರು ನನ್ನ ವಿರುದ್ಧ ಸುಳ್ಳು ಆರೋಪವನ್ನು ಮಾಡಿದ್ದಾರೆ. ಈ ರೀತಿ ಸಚಿವರ ಹೆಸರು ಹೇಳಿ ಓರ್ವ ಶಾಸಕನ ಮೇಲೆ ವಿಧಾನಸೌಧದ ಒಳಗೆ ಹಲ್ಲೆಗೆ ಯತ್ನಿಸುತ್ತಾರೆ. ಅವಾಚ್ಯವಾಗಿ ನಿಂದಿಸುತ್ತಿದ್ದಾರೆ ಎಂದರೆ ಇಲ್ಲಿ ಕಾನೂನು ಸುವವಸ್ಥೆ ಇಲ್ಲ. ಶಾಸಕನಿಗೆ ಸರ್ಕಾರಕ್ಕೆ ರಕ್ಷಣೆ ನೀಡುತ್ತಿಲ್ಲ. ಜನ ಸಾಮನ್ಯರ ಗತಿ ಏನಾಗಬೇಕು? ನನಗೆ ರಕ್ಷಣೆ ನೀಡುವ ಭರವಸೆ ನಿಡುವರೆಗೂ ಧರಣಿ ಹಿಂಪಡೆಯಲ್ಲ ಎಂದು ಕಿಡಿಕಾರಿದ್ದಾರೆ.