ಚಿಕ್ಕಬಳ್ಳಾಪುರ: ಕಾಂಗ್ರೆಸ್ ಗೆ ಅಜೀರ್ಣವಾಗುವಷ್ಟು ಬಹುಮತವಿದೆ. ಇದು ಸಾಲದು ಅಂತಾ ಬೇರೆ ಬೇರೆ ಪಕ್ಷಗಳ ಶಾಸಕರ ಸಂಪರ್ಕದಲ್ಲಿ ಇರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬೇರೆಯವರ ಹಂಗು ಯಾಕೆ? ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ರಾಜ್ಯ ಸರ್ಕಾರದ ಖಜಾನೆಯ ಕೀಲಿಕೈ ಒಂದು ಸುರ್ಜೇವಾಲಾ ಕೈಯಲ್ಲಿ ಇನ್ನೊಂದು ವೇಣುಗೋಪಾಲ್ ಬಳಿಯಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಖಜಾನೆ ತುಂಬಿಸುವಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ಬರ ಪರಿಹಾರವನ್ನೂ ನೀಡಿಲ್ಲ, ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಸಂಭಾವನೆಯಲ್ಲಿಯೂ ಮೋಸವಾಗಿದೆ. ಸಂಭಾವನೆ ನೀಡಲು ಇವರ ಬಳಿ ಹಣವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.