ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ತೆಲಂಗಾಣಕ್ಕೆ 5 ಕೋಟಿ ಹಣ ನೀಡಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸರ್ಕಾರ ತೆಲಂಗಾಣಕ್ಕೆ 5 ಕೋಟಿ ಹಣ ಕೊಟ್ಟಿದೆ. ಲೋಕಸಭಾ ಚುನಾವಣೆ ವೇಳೆ ಕಲಬುರ್ಗಿ, ಬಳ್ಳಾರಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹಣ ಹೋಗಿದೆ. ಕಲಬುರ್ಗಿಯಿಂದ ಖರ್ಗೆ ಅಳಿಯ ರಾಧಾಕೃಷ್ಣ ಸ್ಪರ್ಧಿಸಿದ್ದರು. ಒಂದುವೇಳೆ ಸಿಬಿಐ ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ಈವರೆಗೆ 11 ಜನರ ಬಂಧನವಾಗಿದೆ. ಉಳಿದವರನ್ನು ಯಾಕೆ ಬಂಧಿಸಿಲ್ಲ? ಹಣವನ್ನು ಜಪ್ತಿ ಮಾಡಿಲ್ಲ ಯಾಕೆ? ಎಲ್ಲದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.