ಚಿಕ್ಕಮಗಳೂರು: ಹಿಂದಿನ ವೈಎಸ್ ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ,ರವಿ, ಜನರ ಧಾರ್ಮಿಕ ಭಾವನೆಗಳ ಜೊತೆ ಯಾರೂ ಆಟವಾಡಬಾರದು ಎಂದು ಗರಂ ಆಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಚಂದ್ರಬಾಬು ನಾಯ್ಡು ಅವರ ಹೇಳಿಕೆಯನ್ನು ನಾನೂ ಗಮನಿಸಿದ್ದೇನೆ. ಇದು ಚಿಕ್ಕ ವಿಚಾರವಲ್ಲ, ಗಂಭೀರವಾದ ವಿಚಾರ. ಚಂದ್ರಬಾಬು ನಾಯ್ಡು ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸೋಣ. ತಿರುಪತಿ ಲಡ್ಡು ಪ್ರಸಾದದ ಜೊತೆ ಜನರ ಭಾವನಾತ್ಮಕ ಸಂಬಂಧವಿದೆ. ನಾವೆಲ್ಲರೂ ಲಡ್ಡುವನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿದ್ದೇವೆ. ಭಾವನಾತ್ಮಕ ವಿಚಾರದಲ್ಲಿ ಯಾರೂ ಆಟವಾಡಬಾರದು ಎಂದು ಹೇಳಿದರು.
ಚಂದ್ರಬಾಬು ನಾಯ್ಡು ಅವರ ಹೇಳಿಕೆ ಸತ್ಯವಾಗಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದರಿಂದ ಭಕ್ತರಲ್ಲಿಯೂ ಸಾಕಷ್ಟು ಗೊಂದಲಗಳುಂಟಾಗುತ್ತವೆ. ಹಾಗಾಗಿ ಭಕ್ತರ ಸಂಶಯ ದೂರವಾಗಿಸಲು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.