
ಚಿಕ್ಕಮಗಳೂರು: ಸಾಲಮನ್ನಾ ಆಸೆಗಾಗಿ ಪದೇ ಪದೇ ಬರಗಾಲ ಬರಲಿ ಎಂದು ರೈತರು ಆಶಿಸುತ್ತಾರೆ. ಹಣ ಸಿಗುತ್ತೆ ಎಂದು ರೈತರು ಆತ್ಮಹತ್ಯೆ ಮಡಿಕೊಳ್ಳುತ್ತಾರೆ ಎಂದು ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ನದಾತನನ್ನು ಅವಮಾನಿಸಿದ ಸಚಿವರು ಮೊದಲು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ.ರವಿ, ಸಚಿವ ಶಿವಾನಂದ ಪಾಟೀಲ್ ಅವರ ಬಾಯಲ್ಲಿ ಬಂದ ಈ ಮಾತು ಸಹಿಸಲಾಗದು. ಮಣ್ಣನ್ನೇ ಪೂಜಿಸಿ, ಮಣ್ಣನ್ನೇ ನಂಬಿ, ಬೆಳೆಗಳನ್ನು ಬೆಳೆದು ಈಡೀ ಜಗತ್ತಿಗೆ ಆಹಾರವನ್ನು ನೀಡುವ ಅನ್ನದಾತರು ರೈತರು. ಅಂತಹ ರೈತರನ್ನು ಮಂತ್ರಿಯಾದವರು ಅವಮಾನಿಸಿರುವುದು ದುರಹಂಕಾರದ ಪ್ರತೀಕ ಎಂದು ಕಿಡಿಕಾರಿದ್ದಾರೆ.
ಸಚಿವರಿಗೆ ಅಹಂಕಾರದ ಪಿತ್ತ ನೆತ್ತಿಗೇರಿದೆ. ಸ್ಥಿತ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನೀವೆ ನಿಮ್ಮ ಸಚಿವರ ಮದ ಇಳಿಸಿ. ಇಲ್ಲವಾದರೆ ಜನ ನಿಮ್ಮನ್ನೂ ಸೇರಿಸಿ ಎಲ್ಲಾ ಸಚಿವ ಮದ ಇಳಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.