ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಪೊಲೀಸರು ಬಿ ರಿಪೋರ್ಟ್ ಹಾಕುವ ಹಂತದಲ್ಲಿದ್ದಾಗ ಏಕಾಏಕಿ ಈ ಕೇಸ್ ಗೆ ಪರಕಾಯ ಪ್ರವೇಶ ಮಾಡಿ ಜೀವ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ರಾಜಕೀಯ ಕಾರಣಕ್ಕೆ ಈ ಕೇಸ್ ಬಳಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತಿದೆ. ಹಾಗಿಲ್ಲದಿದ್ದರೆ ಮೂರು ತಿಂಗಳ ಕಾಲ ಇಲ್ಲದ ಜೀವ ಈಗ ಯಾಕೆ ಬಂತು? ಈ ಕೇಸ್ ಮೇಲೆ ಪರಕಾಯ ಪ್ರವೇಶ ಮಾಡಿದವರು ಯಾರು? ಎಂದು ಕೇಳಿದ್ದಾರೆ.
ದೂರುದಾರೆ ಈ ರೀತಿ 50ಕ್ಕೂ ಹೆಚ್ಚು ಗಣ್ಯರ ಮೇಲೆ ದೂರು ನೀಡಿದ್ದರು ಎಂದು ಗೃಹ ಸಚಿವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಈಗ ಯಡಿಯೂರಪ್ಪ ಅವರ ಮೇಲೆ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಸರ್ಕಾರದ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮಾರ್ಚ್ 14ರಂದು ಅವರ ಮೇಲೆ ದೂರು ದಾಖಲಾಗಿದೆ. ಫೆ.2ರಂದು ಪ್ರಕರಣ ನಡೆದಿರುವುದಾಗಿ ಆರೊಪಿಸಲಾಗಿದೆ. ಯಡಿಯೂರಪ್ಪ ಸಿಐಡಿ ಮುಂದೆ ಏಪ್ರಿಲ್ 12ರಂದು ಹಾಜರಾಗಿ ಹೇಳಿಕೆಯನ್ನೂ ನೀಡಿದ್ದಾರೆ. ಹೀಗಿರುವಾಗ ಈಗ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಯಡಿಯೂರಪ್ಪ ವಿರುದ್ಧದ ಮೊಕದ್ದಮೆಯನ್ನು ರಾಜ್ಯ ಸರ್ಕಾರ ರಾಜಕೀಯ ದೃಷ್ಟಿಯಿಂದ ನೋಡುತ್ತಿದೆ ಎಂದು ಕಿಡಿಕಾರಿದರು.