
ಚಿಕ್ಕಮಗಳೂರು: ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ಸಿಐಡಿ ತನಿಖೆಯಿಂದ ನ್ಯಾಯ ಸಿಗಲ್ಲ, ನ್ಯಾಯಾಂಗ ತನಿಖೆಯಾಗಲಿ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸಿಐಡಿಯಿಂದ ನ್ಯಾಯ ಸಿಗಲ್ಲ, ಒತ್ತಡವಿಲ್ಲದೇ ಕೆಲಸ ಮಾಡಿದರೆ ರಕ್ಷಣೆ ಸಿಗಬಹುದು. ಅದನ್ನು ಸಿಐಡಿ ಅಲ್ಲ, ಓರ್ವ ಕಾನ್ಸ್ ಟೇಬಲ್ ಕೂಡ ಮಾಡಬಹುದು. ಆದರೆ ಒತ್ತಡವಿದ್ದಾಗ ಸಿಐಡಿಯಿಂದ ನ್ಯಾಯ ಸಿಗುವಸಾಧ್ಯತೆ ಇಲ್ಲ. ನ್ಯಾಯ ಸಮ್ಮತವಾಗಿದ್ದರೆ ಸಿಐಡಿಗೆ ನೀಡಬೇಕಿರುವ ಅಗತ್ಯವಿಲ್ಲ ಎಂದರು.
ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆಯಾಗಲಿ. ಹಾಗಾಗಿ ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.