
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಡಿದ್ದ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಬಂಧನದ ಬಳಿಕ ಬೆಳಿಗ್ಗೆವರೆಗೂ ಬೆಳಗಾವಿಯಾದ್ಯಂತ ಪೊಲೀಸರು ಸುತ್ತಾಟ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಕಾರಣ ತಿಳಿಸಿದ್ದಾರೆ. ಸಿ.ಟಿ.ರವಿ ಅವರ ಭದ್ರತೆಯ ದೃಷ್ಟಿಯಿಂದ ಶಿಫ್ಟ್ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಸುರ್ವಣಸೌಧದಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿದ ಬಳಿಕ ಹಿರೇಬಾಗೇವಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದೆವು. ಆದರೆ ಅಲ್ಲಿಗೆ ಕರೆದೊಯ್ದರೆ ಸಮಸ್ಯೆಯಾಗಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ಬಂದ ಕಾರಣ ಅವರನ್ನು ಖಾನಾಪುರ ಠಾಣೆಗೆ ಕರೆದೊಯ್ಯಲಾಯಿತು. ಹಿರೇಬಾಗೇವಾಡಿ ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಖಾನಾಪುರ ಠಾಣೆಗೆ ಕರೆದುಕೊಂಡು ಹೋದಾಗ ಅಲ್ಲಿಯೂ ಜನ ಸೇರಿದ್ದರು. ಕೆಲ ಘಟನೆಗಳು ನಡೆದವು.
ಅಷ್ಟರಲ್ಲಿ ಬೆಳಗಾವಿ ನಗರ, ಅಕ್ಕಪಕ್ಕದ ಹಳ್ಳಿಗಳಿಂದಲೂ ಹಲವು ಜನರ ಬರುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಹೀಗಾಗಿ ಸಿ.ಟಿ.ರವಿ ಅವರ ಭದ್ರತೆ ದೃಷ್ಟಿಯಿಂದ ಅವರನ್ನು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಬೇಕಾಯಿತು ಎಂದು ತಿಳಿಸಿದ್ದಾರೆ.