ಕಲಬುರಗಿ: ಕೇಂದ್ರ ಸರ್ಕಾರದ ಮಾದರಿ ವೇತನ ಜಾರಿ ಮಾಡಬೇಕು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮುಂದುವರೆಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಒತ್ತಾಯಿಸಿದ್ದಾರೆ.
ಎಸ್ಎಂ ಪಂಡಿತ ರಂಗಮಂದಿರದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎನ್.ಪಿ.ಎಸ್. ರದ್ದುಗೊಳಿಸಿ ಎಲ್ಲಾ ನೌಕರರಿಗೆ ಹಳೆ ಪಿಂಚಣಿ ಯೋಜನೆ ಅನ್ವಯಿಸಬೇಕು. ಕೇಂದ್ರದ ಮಾದರಿ ವೇತನ ನೀಡಬೇಕೆಂಬುದು ಸಂಘದ ಮುಂದಿನ ಗುರಿಯಾಗಿದೆ. 2022 ರ ವೇಳೆಗೆ ಕೇಂದ್ರದ ಮಾದರಿ ವೇತನ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಶೇಕಡ 48 ರಷ್ಟು ಎನ್.ಪಿ.ಎಸ್. ನೌಕರರಿದ್ದಾರೆ. ಮುಂದಿನ ಪೀಳಿಗೆಗೂ ಎನ್.ಪಿ.ಎಸ್. ಮುಂದುವರೆಯಲಿದೆ. ಇದನ್ನು ರದ್ದುಪಡಿಸುವಂತೆ ಹೋರಾಟ ನಡೆಸಲು ಕೇಂದ್ರ ಮೇಲೆ ಒತ್ತಡ ಹೇರಲು ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಿ ನೌಕರರ ಸಂಘಟನೆಗಳೊಂದಿಗೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರದ ಎನ್.ಪಿ.ಎಸ್. ನೀತಿ ನೌಕರರನ್ನು ಇಳಿವಯಸ್ಸಿನಲ್ಲಿ ಸಂಕಷ್ಟಕ್ಕೆ ದೂಡುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಸಮಾನವಾದ ಕೆಲಸ ಮಾಡಿದರೂ ವೇತನದಲ್ಲಿ ವ್ಯತ್ಯಾಸವಿದೆ. ಈ ತಾರತಮ್ಯ ಹೋಗಲಾಡಿಸಬೇಕು ಎಂದು ಹೋರಾಟ ನಡೆಸಲಾಗುವುದು. ಹೋರಾಟಕ್ಕೆ ಕರೆ ನೀಡಿದಾಗ ಎಲ್ಲಾ ನೌಕರರು ಕೈಜೋಡಿಸಬೇಕೆಂದು ಮನವಿ ಮಾಡಿದ ಅವರು, ಶಿಕ್ಷಕರ ವರ್ಗಾವಣೆ, ಬಡ್ತಿ, ನೇಮಕಾತಿ ನಿಯಮಾವಳಿ ತಿದ್ದುಪಡಿ ಸೇರಿದಂತೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.