ಬೈಂದೂರು ಕುಂದಾಪುರದಿಂದ ಸುಮಾರು 32 ಕಿಲೋ ಮೀಟರ್ ದೂರದಲ್ಲಿದ್ದು, ರಾಜ್ಯದ ಪ್ರವಾಸಿತಾಣಗಳಲ್ಲಿ ಒಂದಾಗಿದೆ.
ಇಲ್ಲಿ ಬಿಂದುಋಷಿ ಮಹರ್ಷಿಗಳು ತಪಸ್ಸು ಮಾಡಿದ್ದ ಕಾರಣಕ್ಕೆ ಬಿಂದುನಾಡು, ಬಿಂದುಪುರ, ಬಿಂದೂರು ಹೆಸರಿನಿಂದ ಕರೆಯಲಾಗುತ್ತಿತ್ತು. ಇದೇ ಕಾಲಕ್ರಮೇಣ ಬೈಂದೂರು ಆಗಿದೆ ಎನ್ನಲಾಗಿದೆ.
ಬೈಂದೂರಿನ ದೇವಾಲಯಗಳು, ಸೋಮೇಶ್ವರ ಬೀಚ್, ಕೋಸಳ್ಳಿ ಜಲಪಾತ, ನೇಸರ ಧಾಮ ಮೊದಲಾದವು ನೋಡಬಹುದಾದ ಸ್ಥಳಗಳಾಗಿವೆ.
ಬೈಂದೂರಿನಿಂದ ಪಶ್ಚಿಮಾಭಿಮುಖವಾಗಿ ಸ್ವಲ್ಪ ದೂರದಲ್ಲಿಯೇ ಇರುವ ಸೋಮೇಶ್ವರ ಬೀಚ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
ಬೈಂದೂರಿನ ರಕ್ಷಣಾಗೋಡೆಯ ರೀತಿಯಲ್ಲಿರುವ ಒತ್ತಿನೆಣೆ ಗುಡ್ಡದ ಅಂಚಿನಿಂದ ಕಾಣಸಿಗುವ ಆಕರ್ಷಕ ಸೌಂದರ್ಯ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮಾರುಹೋಗದೇ ಇರಲಾರಿರಿ. ಕಡಲಿನ ಅಲೆಗಳು ಪ್ರವಾಸಿಗರಿಗೆ ಖುಷಿ ನೀಡುತ್ತದೆ. ಸುತ್ತಮುತ್ತ ನೋಡಬಹುದಾದ ಹಲವಾರು ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಪ್ರವಾಸಕ್ಕೆ ಹೊರಟರೆ ಅನುಕೂಲವಾಗುತ್ತದೆ ನೀವೂ ಒಮ್ಮೆ ಸೋಮೇಶ್ವರ ಬೀಚ್ ಸೌಂದರ್ಯ ಕಣ್ತುಂಬಿಕೊಳ್ಳಿ.