ಮಂಡ್ಯ: ಜೆಡಿಎಸ್ ಜೊತೆಗೆ ಮೈತ್ರಿ ವಿಚಾರದಲ್ಲಿ ಯಾರ ತಕರಾರೂ ಇಲ್ಲ. ಜೆಡಿಎಸ್ ಪಕ್ಷ ಎನ್.ಡಿ.ಎ. ತೆಕ್ಕೆಗೆ ಬರಬೇಕು ಎಂಬುದು ವರಿಷ್ಠರ ತೀರ್ಮಾನವಾಗಿದೆ. ಈ ತೀರ್ಮಾನದ ಬಗ್ಗೆ ರಾಜ್ಯದಲ್ಲಿ ಉತ್ಸಾಹ ಇದೆ. ಮೈತ್ರಿಯಿಂದ ತಳಮಟ್ಟದ ಕಾರ್ಯಕರ್ತರಿಗೂ ಉತ್ಸಾಹ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೆಚ್ಚು ಸ್ಥಾನ ಗಳಿಸಲಿವೆ. ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಕೆಲಸ ಮಾಡುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಕೈ ಬಿಡುವ ಪ್ರಶ್ನೆ ಇಲ್ಲ. ಮಂಡ್ಯದಲ್ಲಿ ಪಕ್ಷನ ಸಂಘಟನೆಗೆ ನಾಯಕರಿಗೆ ಶಕ್ತಿ ಕೊಡುತ್ತೇವೆ ಎಂದು ಹೇಳಿದ್ದಾರೆ.
ನಾವು ಜನರ ಬಳಿ ಹೋಗದ ಕಾರಣ ಮಂಡ್ಯದಲ್ಲಿ ಹಿನ್ನಡೆಯಾಗಿದೆ. ಕೆಆರ್ ಪೇಟೆ ಚುನಾವಣೆ ಗೆದ್ದ ಬಳಿಕ ಜನರ ಬಳಿ ಹೋಗಬೇಕಿತ್ತು. ನಾವು ಹೆಚ್ಚು ಜನರ ಬಳಿಗೆ ಹೋಗದ ಕಾರಣ ಮಂಡ್ಯ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ. ನಾವು ಗೆದ್ದಿದ್ದ ಕೆಆರ್ ಪೇಟೆ ಕ್ಷೇತ್ರವನ್ನು ಕೂಡ ಕಳೆದುಕೊಂಡಿದ್ದೇವೆ. ಈಗಿನಿಂದಲೇ ನಾವು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ನನಗೆ ವೈಯಕ್ತಿಕವಾಗಿ ಹೆಸರು ತಂದು ಕೊಟ್ಟಿದ್ದು ಹಳೆಯ ಮೈಸೂರು. ಈ ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಹೇಳಿದ್ದಾರೆ.