ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ನೂತನ ಮಂತ್ರಿಮಂಡಲದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.
ವಿಜಯೇಂದ್ರಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಯಡಿಯೂರಪ್ಪ ಒತ್ತಡ ಹೇರಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನ ಕೊಡದಿದ್ದರೆ ಸಚಿವ ಸ್ಥಾನದೊಂದಿಗೆ ಪ್ರಮುಖ ಖಾತೆ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆಗೆದುಕೊಂಡು ಹೋಗಿದ್ದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರು ಕೂಡ ಇದ್ದು, ನಿನ್ನೆ ರಾತ್ರಿ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಕೇಂದ್ರ ನಾಯಕರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಇಂದು ಸಂಜೆಗೆ ಸಂಪುಟ ಸೇರುವವರ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ವಿಜಯೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಬಹುದು ಎಂದು ಹೇಳಲಾಗಿದೆ. ಉಪಚುನಾವಣೆಗಳಲ್ಲಿ ವಿಜಯೇಂದ್ರ ತಂತ್ರಗಾರಿಕೆ ತೋರಿದ್ದರು. ಬಿಜೆಪಿ ಗೆಲ್ಲದಂತಹ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಿಜೆಪಿಗೆ ನೆಲೆ ಇಲ್ಲದಂತಹ ಕೆಆರ್ ಪೇಟೆ ಮತ್ತು ಶಿರಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಲ್ಲಿ ವಿಜಯೇಂದ್ರ ಪಾತ್ರ ಪ್ರಮುಖವಾಗಿದ್ದು, ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು. ಇವೆಲ್ಲವುಗಳ ನಡುವೆ ಸಂಪುಟಕ್ಕೆ ವಿಜಯೇಂದ್ರ ಕೂಡ ಸೇರ್ಪಡೆಯಾಗಬಹುದು ಎಂದು ಹೇಳಲಾಗುತ್ತಿದೆ.