ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಇಂದು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವಿಜಯೇಂದ್ರ ಪದಗ್ರಹಣ ಮಾಡಲಿರುವ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಗೇಟ್ ನಲ್ಲಿ ಚಪ್ಪರ ಹಾಕಿ ಕೇಸರಿ ಬಟ್ಟೆ ಕಟ್ಟಿ ಶೃಂಗರಿಸಲಾಗಿದೆ.
ಪಕ್ಷದ ಕಚೇರಿಯಿಂದ ಒಂದು ಕಿಲೋಮೀಟರ್ ವರೆಗೆ ಬಿಜೆಪಿ ಬಾವುಟಗಳನ್ನು ಕಟ್ಟಲಾಗಿದೆ. ಇಂದು ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಹೋಮ, ಹವನ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುರೋಹಿತರ ತಂಡದಿಂದ ಹೋಮ ಹವನ ನಡೆಯಲಿದ್ದು, ಬೆಳಗ್ಗೆ 10:30ಕ್ಕೆ ಪೂರ್ಣಾಹುತಿ ನಂತರ ವಿಜಯೇಂದ್ರ ಪದಗ್ರಹಣ ಮಾಡಲಿದ್ದಾರೆ.
ಜಗನ್ನಾಥ ಭವನದ ಮುಂಭಾಗ ವಿಜಯೇಂದ್ರ ಗೋಪೂಜೆ ನಡೆಸಲಿದ್ದಾರೆ. ಬಳಿಕ ರಾಜ್ಯ ಬಿಜೆಪಿ ಕಚೇರಿಯಲ್ಲಿ ಗಣಪತಿ ಹೋಮದ ಪೂರ್ಣಾಹುತಿ ನಡೆಯಲಿದೆ. ಈ ವೇಳೆ ವಿಜಯೇಂದ್ರ, ನಳಿನ್ ಕುಮಾರ್ ಕಟೀಲು ಉಪಸ್ಥಿತರಿರುವರು. ನಂತರ ಹಾಲಿ ಅಧ್ಯಕ್ಷ ಕಟೀಲು ಅವರು ವಿಜಯೇಂದ್ರರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.