ಬೆಂಗಳೂರು: ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಭಾಷಣ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಶುಕ್ರವಾರ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಶೇಷ ಪೀಠದ ಮುಂದೆ ರಾಘವೇಂದ್ರ ಪರ ವಕೀಲರು ಅರ್ಜಿಯ ತುರ್ತು ವಿಚಾರಣೆಗೆ ಪರಿಗಣಿಸಲು ಮನವಿ ಮಾಡಿದ್ದಾರೆ. ಎಫ್ಐಆರ್ ಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದಾರೆ. ಇದಕ್ಕೆ ನ್ಯಾಯಮೂರ್ತಿಗಳು ಮುಂದಿನ ವಾರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿದ್ದಾರೆ.
ಸಂಸದ ರಾಘವೇಂದ್ರ ನಿಯಮ ಉಲ್ಲಂಘಿಸಿದ್ದಾರೆ ಎಂಬ ಅಪರಾಧಗಳ ಬಗ್ಗೆ ಎಫ್ಐಆರ್ ನಲ್ಲಿ ಮಾಹಿತಿ ಉಲ್ಲೇಖಿಸಿಲ್ಲ. ಹಾಗಾಗಿ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸಿದರೆ ಕಾನೂನಿನ ದುರ್ಬಳಕೆ ಆಗುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಲಾಗಿದೆ. ಕಳೆದ ಮಾರ್ಚ್ 23ರಂದು ಚಿತ್ರದುರ್ಗದ ಭೋವಿ ಸಮಾಜದ ಗುರುಪೀಠದಲ್ಲಿ ರಾಘವೇಂದ್ರ ಸಭೆ ನಡೆಸಿ ರಾಜಕೀಯ ಭಾಷಣ ಮಾಡಿದ ಆರೋಪ ಕೇಳಿ ಬಂದಿದೆ. ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಸಭೆ ನಡೆಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.