ಬೆಂಗಳೂರು : ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಘನತೆಗೆ ಮಸಿ ಬಳಿಯುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ಬಳಸುತ್ತಿರುವ ತಂತ್ರಗಳು ಪ್ರಜಾಪ್ರಭುತ್ವ ವಿರೋಧಿಯಾಗಿರುವುದು ಖಂಡನೀಯ. ಸಿಬಿಐ ಮತ್ತು ಇಡಿಯಂತಹ ಸಂಸ್ಥೆಗಳನ್ನು ತಮ್ಮ ರಾಜಕೀಯ ಅಜೆಂಡಾಗಳಿಗೆ ಬಳಸಿಕೊಳ್ಳುವ ಬಿಜೆಪಿ ಸರ್ಕಾರ ಈಗ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ ಪ್ರಜಾಪ್ರಭುತ್ವದ ಘನತೆಗೆ ಮಸಿ ಬಳಿಯುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ನಾವೆಲ್ಲರೂ ಒಗ್ಗೂಡಿ ಬಿಜೆಪಿಯ ಈ ಧೋರಣೆಯ ವಿರುದ್ಧ ಧ್ವನಿ ಎತ್ತಬೇಕು. ಬಿಜೆಪಿ ನಮ್ಮ ಖಾತೆಗಳನ್ನು ಫ್ರೀಜ್ ಮಾಡಬಹುದು ಆದರೆ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ. ದೇಶದ ಪ್ರಜ್ಞಾವಂತ ಪ್ರಜೆಗಳು ಬಿಜೆಪಿಯನ್ನು ತಿರಸ್ಕರಿಸುವ ವಿಶ್ವಾಸವಿದೆ. ಇಂಡಿಯಾ ಮೈತ್ರಿಕೂಟ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಡಿಸಿಎಂ ಡಿಕೆಶಿ ಹೇಳಿದರು.