ಶಿವಮೊಗ್ಗ : ಶಿಕಾರಿಪುರ ತಾಲ್ಲೂಕಿನ ಶಿಕಾರಿಪುರ ಮತ್ತು ಶಿರಾಳಕೊಪ್ಪ ಪುರಸಭೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಿಗೆ ಉಪ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದ್ದು ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಳ್ಳುವವರೆಗೆ ಈ ಪುರಸಭೆ ವ್ಯಾಪ್ತಿಗಳಲ್ಲಿ ಶಸ್ತ್ರ/ಆಯುಧಗಳನ್ನು ಹೊಂದಿರುವವರು ತಕ್ಷಣದಿಂದ ಜಾರಿಗೆ ಬರುಂತೆ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಶಸ್ತ್ರ /ಆಯುಧಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಶಿಕಾರಿಪುರ ತಾಲ್ಲೂಕಿನ ಶಿಕಾರಿಪುರ ಮತ್ತು ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು, ದಿ: 04-11-2024 ರಿಂದ 26-11-2024 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಮುಕ್ತಾಯಗೊಳ್ಳುವವರೆಗೆ ಶಿಕಾರಿಪುರ ಮತ್ತು ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಗಳಲ್ಲಿ ಆಯುಧ ಹೊಂದಿರುವವರು ಸಮೀಪದ ಪೊಲೀಸ್ ಠಾನೆಯಲ್ಲಿ ಠೇವಣಿ ಮಾಡಬೇಕು.
ಠೇವಣಿಯಲ್ಲಿ ಇಡಲಾಗುವ ಶಸ್ತ್ರ /ಆಯುಧಗಳನ್ನು ಚುನಾವಣಾ ಪ್ರಕ್ರಿಯೆ ಮುಕ್ತಾಯವಾದ ನಂತರ ಅಂದರೆ ಚುನಾವಣೆಯ ಫಲಿತಾಂಶ ಘೋಷಿಸಿದ ನಂತರ ಠೇವಣಿ ಮಾಡಿದ ಪರವಾನಿಗೆದಾರರಿಗೆ ಹಿಂದಿರುಗಿಸುವುದು. ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿರುವುದರಿಂದ ಜಿಲ್ಲಾಡಳಿತವು ಕೈಗೊಂಡ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದ್ದಾರೆ.
ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗಳಿಗೆ ಎಂ.ಪಿ.ಎ/ವಿ.ಐ.ಎಸ್.ಎಲ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯದಲ್ಲಿರುವ ಆಯುಧ ಪರವಾನಿಗೆ ಹೊಂದಿರುವ ಸಿಬ್ಬಂದಿಗಳಿಗೆ ಈ ಆದೇಶವು ಅನ್ವಯವಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.