ಬೆಂಗಳೂರು: ಬೆಂಗಳೂರು ಜಲಮಂಡಳಿ ತೀವ್ರ ನಷ್ಟದಲ್ಲಿದ್ದು, ಸಂಬಳ ನೀಡಲು ಹಣವಿಲ್ಲದ ಪರಿಸ್ಥಿತಿಯಿದೆ. ಹಾಗಾಗಿ ನೀರಿನ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು. ಇದೀಗ ಜಲಮಂಡಳಿಯ 200ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ರಾತ್ರಿ ಬೆಳಗಾಗುವಷ್ಟರಲ್ಲಿ ಜಲಮಂಡಳಿಯ ನೂರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಸ್ಥಳ ನಿಯೋಜಿಸಿ ಆದೇಶ ಹೊರಡಿಸಲಾಗಿದ್ದರೆ, ಇನ್ನು ಹಲವು ಸಿಬ್ಬಂದಿಗಳಿಗೆ ಮುಂಬಂಡ್ತಿ ನೀಡಲಾಗಿದೆ. ಇನ್ನು ಕೆಲ ಸಿಬ್ಬಂದಿಗಳು ವರ್ಗಾವಣೆಗೊಂಡಿದ್ದಾರೆ. ಕೆಲ ಅಧಿಕಾರಿಗಳಿಗೆ ಡಬಲ್ ಪೋಸ್ಟಿಂಗ್ ನೀಡಲಾಗಿದೆ. ಬೆಂಗಳೂರು ಉಸ್ತುವಾರಿ ಸಚಿವರ ಗಮನಕ್ಕೂ ತರದೇ ಏಕಾಏಕಿ ಜಲಮಂಡಳಿ ಸಿಬ್ಬಂದಿ ವರ್ಗಾವಣೆ ಮಾದಲಾಗಿದೆ ಎನ್ನಲಾಗಿದ್ದು, ಸಾಕಷ್ಟು ಅನುಮಾನ ವ್ಯಕ್ತವಾಗಿದೆ.
ವಾಟರ್ ಇನ್ಸ್ ಪೆಕ್ಟರ್, ಕ್ಲರ್ಕ್, ಹೆಲ್ಪರ್ ಸೇರಿದಂತೆ ಹಲವು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಜಲಮಂಡಳಿಯಲ್ಲಿ ನಡೆದಿರುವ ದಿಢೀರ್ ವರ್ಗಾವಣೆ ಹಿಂದೆ ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಆಡಳಿತಾಧಿಕಾರಿ ಹಾಗೂ ನೌಕರರ ಸಂಘದ ಅಧ್ಯಕ್ಷರಿಂದ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಟ್ಟಾರೆ BWSSBಯಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ ಮಾಹಿತಿ ಇಲ್ಲದೇ ಏಕಾಏಕಿ ವರ್ಗಾವಣೆ ಅಚ್ಚರಿಗೆ ಕಾರಣವಾಗಿದೆ.