ಬೆಂಗಳೂರು: ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೋಯಾಬಿನ್, ಸೂರ್ಯಕಾಂತಿ, ಹತ್ತಿ ನಂತರ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರೊಂದಿಗೆ ಎಂಟು ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಲು ಒಪ್ಪಿಗೆ ಸಿಕ್ಕಿದೆ ಸಿಕ್ಕಿರುವುದು ಇದೇ ಮೊದಲ ಬಾರಿಯಾಗಿದೆ.
ಉಂಡೆ ಕೊಬ್ಬರಿ, ಮಿಲ್ಲಿಂಗ್ ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೂರ್ಯಕಾಂತಿ, ಸೋಯಾಬಿನ್ ಗಳನ್ನು ಬೆಂಬಲ ಬೆಲೆ ಅಡಿ ಖರೀದಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಶೇಂಗಾ ಕ್ವಿಂಟಲ್ ಗೆ 2500 ರೂ. ನಿಂದ 7400 ರೂ.ವರೆಗೂ ದರ ಇದೆ.
ಈಗಾಗಲೇ ಹಲವು ಕಡೆಗಳಲ್ಲಿ ರೈತರು ಕೊಯ್ಲು ಪೂರ್ಣಗೊಳಿಸಿ ಶೇಂಗಾ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಬೆಲೆ ಇಳಿಕೆ ಆತಂಕದಲ್ಲಿದ್ದ ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಿರುವುದರಿಂದ ಅನುಕೂಲವಾಗಲಿದೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಶೇಂಗಾಕ್ಕೆ 6783 ರೂಪಾಯಿ ದರ ನಿಗದಿ ಪಡಿಸಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಶೇಂಗಾ ಖರೀದಿಗೆ ಕೇಂದ್ರದಿಂದ ಎರಡು ಮತ್ತು ರಾಜ್ಯ ಸರ್ಕಾರದಿಂದ ನಾಲ್ಕು ಏಜೆನ್ಸಿಗಳನ್ನು ಗುರುತಿಸಲಾಗಿದೆ. ಧಾರವಾಡ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ಗದಗ, ರಾಯಚೂರು, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಅವಶ್ಯಕತೆ ಅನುಗುಣವಾಗಿ ಖರೀದಿ ಕೇಂದ್ರ ತೆರೆಯಲಾಗುವುದು ಎಂದು ಹೇಳಲಾಗಿದೆ.