ಬೆಂಗಳೂರು: ಹೆಣ್ಣು ಭ್ರೂಣಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸುತ್ತಿದ್ದ ಜಾಲವನ್ನು ಇತ್ತೀಚೆಗೆ ಭೇದಿಸಿ ನಾಲ್ವರನ್ನು ಬಂಧಿಸಿದ್ದ ಬೈಯ್ಯಪ್ಪನಹಳ್ಳಿ ಠಾಣೆ ಪೋಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಚೆನ್ನೈ ಮೂಲದ ವೈದ್ಯ ಸೇರಿದಂತೆ ಮೂವರನ್ನು ಹೆಣ್ಣು ಭ್ರೂಣಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಚೆನ್ನೈ ಮೂಲದ ಡಾ. ತುಳಸಿರಾಮ್, ಮೈಸೂರಿನ ಉದಯಗಿರಿ ಮಾತಾ ಆಸ್ಪತ್ರೆ ವ್ಯವಸ್ಥಾಪಕಿ ಸಿ.ಎಂ. ಮೀನಾ, ರಿಸೆಪ್ಷನಿಸ್ಟ್ ರಿಜ್ಮಾ ಖಾನಂ ಬಂಧಿತರು.
ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೊಳೇನಹಳ್ಳಿಯ ನಯನಕುಮಾರ, ಪಾಂಡವಪುರ ತಾಲೂಕಿನ ಸುಂಕದನೂರು ಗ್ರಾಮದ ನವೀನ್ ಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಟಿ.ಎಂ. ವೀರೇಶ್ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.
ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿಯ ಅನ್ವಯ ಮತ್ತೆ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಆರೋಪಿ ಮೀನಾ ಪತಿ ವೈದ್ಯ ಚಂದನ್ ಬಲ್ಲಾಳ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಕಳೆದ ಮೂರು ವರ್ಷಗಳಿಂದ ಮೈಸೂರಿನ ಮಾತಾ ಆಸ್ಪತ್ರೆ ಮತ್ತು ಬೆಂಗಳೂರಿನ ರಾಜಕುಮಾರ್ ರಸ್ತೆಯ ಆಯುರ್ವೇದಿಕ್ ಸೆಂಟರ್ ನಲ್ಲಿ ನೂರಾರು ಹೆಣ್ಣು ಮಕ್ಕಳ ಗರ್ಭಪಾತ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.