ಬೆಂಗಳೂರು: ಐಎ ಎಸ್ ಹಾಗೂ ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಯುವಕನೊಬ್ಬ ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉದ್ಯಮಿ ಚೇತನ್ ಷಾ ಎಂಬುವವರನ್ನು ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಚಿನ್ ಹಾಗೂ ಗೌರಿ ಶಂಕರ್ ಬಂಧಿತ ಆರೋಪಿಗಳು.
ಉದ್ಯಮಿ ಚೇತನ್ ಷಾ, ತನ್ನ ಮಗಳಿಗೆ ಬಿಬಿಎ ಸೀಟ್ ಕೊಡಿಸಲು ಓಡಾಡುತ್ತಿದ್ದರು. ಈ ವೇಳೆ ಸಚಿನ್ ಎಂಬಾತ ಚೇತನ್ ಷಾ ಸಂಪರ್ಕಕ್ಕೆ ಬಂದಿದ್ದ. ತಾನು ಬಿವಿಎ ಸೀಟ್ ಕೊಡಿಸುವುದಾಗಿ ಹೇಳಿ ಹಣ ಕೇಳಿದ್ದ. ಇದೇ ವೇಳೆ ಚೇತನ್ ಷಾ ಅವರ ಮಗಳಿಗೆ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕಾಲೇಜು ನಿಯಮದಂತೆ ಸೀಟ್ ಸಿಕ್ಕಿತ್ತು. ಆದರೆ ಸಚಿನ್ ಆ ಸೀಟ್ ತಾನು ಕೊಡಿಸಿದ್ದು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದ. ಹಣ ನೀಡಲು ಚೇತನ್ ಷಾ ನಿರಾಕರಿಸಿದ್ದರು.
ಇದರಿಂದ ಉದ್ಯಮಿ ಚೇತನ್ ಷಾ ಕಿಡ್ನ್ಯಾಪ್ ಗೆ ಸಚಿನ್ ಸಂಚು ರೂಪಿಸಿ, ತನ್ನ ಸಹಚರರ ಜೊತೆ ಸೇರಿ ಆಟೋದಲ್ಲಿ ಕಿಡ್ನ್ಯಾಪ್ ಮಾಡಿ ಬಳಿಕ ಕಾರಿನಲ್ಲಿ ಕರೆದೊಯ್ದಿದ್ದರು. ಹಣ ಕೈ ಸೇರುವವರೆಗೂ ಕಾರಿನಲ್ಲಿ ಇಡೀ ಬೆಂಗಳೂರನ್ನು ಸುತ್ತಾಡಿಸುತ್ತಲೇ ಇದ್ದರು. ಕೊನೆಗೆ ಉದ್ಯಮಿಯಿಂದ 7 ಲಕ್ಷ ಹಣ ಪಡೆದು ಕಾರಿನಿಂದ ಇಳಿದು ಆರೋಪಿಗಳು ಪರಾರಿಯಾಗಿದ್ದರು.
ರಾಜಾಜಿನಗರ ಠಾಣೆಯಲ್ಲಿ ಉದ್ಯಮಿ ಚೇತನ್ ಷಾ ದೂರು ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಆರೋಪಿ ಸಚಿನ್ ಹಾಗೂ ಗೌರಿ ಶಂಕರ್ ನನ್ನು ಪೊಲೀಸರು ಬಂಧಿಸಿದ್ದು, 7 ಲಕ್ಷ ಹಣ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.