ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಶ್ರೀಘ್ರದಲ್ಲೇ ನಿವೃತ್ತಿ ಹೊಂದಲು ಚಿಂತನೆ ನಡೆಸಿದ್ದಾರೆ. 62 ವರ್ಷದ ಗೌತಮ್ ಅದಾನಿ ಸದ್ಯದಲ್ಲೇ ತಮ್ಮ ಸಾಮ್ರಾಜ್ಯವನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸುವ ತಯಾರಿಯಲ್ಲಿದ್ದಾರೆ.
ಸಂದರ್ಶನವೊಂದರಲ್ಲಿ ಅದಾನಿ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. 2030ರ ವೇಳೆಗೆ ಕಂಪನಿಯನ್ನು ಮಕ್ಕಳು ಮತ್ತು ಸೋದರಳಿಯರಿಗೆ ಹಸ್ತಾಂತರಿಸುತ್ತಾರಂತೆ. ಈ ಲೆಕ್ಕಾಚಾರದ ಪ್ರಕಾರ ಸುಮಾರು 70ರ ಆಸುಪಾಸಿನಲ್ಲಿ ಅದಾನಿ ನಿವೃತ್ತಿ ಘೋಷಿಸಬಹುದು.
ಗೌತಮ್ ಅದಾನಿ ಇಷ್ಟು ಬೇಗ ನಿವೃತ್ತಿ ಪಡೆಯುತ್ತಿರುವುದೇಕೆ?
ಸರಿಸುಮಾರು 70 ವರ್ಷ ವಯಸ್ಸಿನವರೆಗೆ ಕೆಲಸ ಮಾಡುವುದು ಅದಾನಿ ಅವರ ಬಯಕೆ. ಹಾಗಾಗಿ 2030ರ ವೇಳೆಗೆ ಅದಾನಿ ಗ್ರೂಪ್‌ನ ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಅವರು ಹೇಳಿದ್ದಾರೆ. ಅವರ ನಿವೃತ್ತಿಯ ನಂತರ ಕಂಪನಿಯ ಜವಾಬ್ಧಾರಿ ಇಬ್ಬರು ಪುತ್ರರು ಮತ್ತು ಇಬ್ಬರು ಸೋದರಳಿಯರ ಮೇಲಿರುತ್ತದೆ. ಮಕ್ಕಳಾದ ಕರಣ್ ಅದಾನಿ ಮತ್ತು ಜೀತ್ ಅದಾನಿ, ಅವರ ಸೋದರಳಿಯರಾದ ಪ್ರಣವ್ ಮತ್ತು ಸಾಗರ್ ಅದಾನಿ ಸಮಾನ ಫಲಾನುಭವಿಗಳಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಕಂಪನಿಗಳಲ್ಲಿ ಯಾರು ಯಾವ ಜವಾಬ್ದಾರಿಗಳನ್ನು ಹೊಂದಿರುತ್ತಾರೆ ಎಂಬುದರ ಕುರಿತು ಗೌಪ್ಯ ಒಪ್ಪಂದವಿರುತ್ತದೆ. ಇದರಲ್ಲಿ ಅದಾನಿ ಗ್ರೂಪ್ ಕಂಪನಿಗಳಲ್ಲಿನ ಷೇರುಗಳು ಮತ್ತು ಉತ್ತರಾಧಿಕಾರಿಗಳ ನಡುವಿನ ವರ್ಗಾವಣೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಪ್ರಸ್ತುತ ಗೌತಮ್ ಅದಾನಿ ಅವರ ಹಿರಿಯ ಮಗ ಕರಣ್ ಅದಾನಿ ಅದಾನಿ ಪೋರ್ಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರೆ. ಕಿರಿಯ ಮಗ ಜೀತ್ ಅದಾನಿ, ಅದಾನಿ ಎಂಟರ್‌ಪ್ರೈಸಸ್‌ನ ನಿರ್ದೇಶಕರಾಗಿದ್ದಾರೆ. ಸಾಗರ್ ಅದಾನಿ, ಅದಾನಿ ಪೋರ್ಟ್‌ನ ಜವಾಬ್ಧಾರಿಯನ್ನು ನಿರ್ವಹಿಸುತ್ತಿದ್ದಾರೆ.
ಗೌತಮ್ ಅದಾನಿ ನಿವೃತ್ತಿಯ ನಂತರ ಅದಾನಿ ಗ್ರೂಪ್ ಅಧ್ಯಕ್ಷರ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಕರಣ್ ಅದಾನಿ ಮತ್ತು ಪ್ರಣವ್ ಅದಾನಿ ಇದಕ್ಕೆ ಪ್ರಬಲ ಸ್ಪರ್ಧಿಗಳಾಗಲಿದ್ದಾರೆ. ವ್ಯವಹಾರದ ಸ್ಥಿರತೆಗೆ ಉತ್ತರಾಧಿಕಾರ ಬಹಳ ಮುಖ್ಯ ಎಂಬುದು ಗೌತಮ್ ಅದಾನಿ ಅವರ ಅಭಿಪ್ರಾಯ. ಬದಲಾವಣೆಯು ಅತ್ಯಂತ ವ್ಯವಸ್ಥಿತವಾಗಿರಬೇಕು ಎಂಬ ಕಾರಣದಿಂದ ಆಯ್ಕೆಯನ್ನು ಅವರು ಮುಂದಿನ ಪೀಳಿಗೆಗೇ ಬಿಟ್ಟುಬಿಡಲು ಮುಂದಾಗಿದ್ದಾರೆ.