ಬೆಳಗಾವಿ: ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣನವರ(47) ಅವರ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇದು ಸಂಚು ರೂಪಿಸಿ ನಡೆಸಿದ ಕೊಲೆ ಇರಬಹುದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಬುಧವಾರ ಶವ ಹೊರ ತೆಗೆದು ತನಿಖೆ ಕೈಗೊಳ್ಳಲಾಗಿದೆ.
ಸಂತೋಷ್ ಪತ್ನಿ ಹಾಗೂ ಇತರೆ ನಾಲ್ವರ ವಿರುದ್ಧ ಅವರ ಪುತ್ರಿ ಸಂಜನಾ(19) ದೂರು ದಾಖಲಿಸಿದ್ದಾರೆ. ಆಂಜನೇಯ ನಗರದ ಮೂರು ಅಂತಸ್ತಿನ ಕಟ್ಟಡದಲ್ಲಿ ಸಂತೋಷ ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರೊಂದಿಗೆ ವಾಸವಾಗಿದ್ದರು. ಅಕ್ಟೋಬರ್ 9ರಂದು ರಾತ್ರಿ ಏಕಾಏಕಿ ಅವರು ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ ಉಮಾ ತಿಳಿಸಿದ್ದಾರೆ. ಇದನ್ನು ನಂಬಿದ ಕುಟುಂಬದವರು ಅಕ್ಟೋಬರ್ 10ರಂದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಬೆಂಗಳೂರಿನಲ್ಲಿ ಓದುತ್ತಿದ್ದ ಪುತ್ರಿ ಸಂಜನಾ ಅದೇ ದಿನ ಬೆಳಗಾವಿಗೆ ಆಗಮಿಸಿದ್ದು, ತಮ್ಮ ತಂದೆಯ ಕೊನೆ ಕ್ಷಣಗಳನ್ನು ನೋಡಲು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಅವರನ್ನು ಗದರಿಸಿದ ತಾಯಿ ಸ್ನಾನ ಮುಗಿಸಿಕೊಂಡು ನಂತರ ತೋರಿಸುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ. ಸಂಜನಾ ಸ್ನಾನ ಮುಗಿಸಿಕೊಂಡು ಬರುವಷ್ಟರಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿಸಲಾಗಿದೆ. ಸಂಜನಾಗೆ ಅನುಮಾನ ಶುರುವಾಗಿದ್ದು, ಆರೋಗ್ಯವಾಗಿದ್ದ ತಂದೆ ಸಹಜವಾಗಿ ಮೃತಪಟ್ಟಿಲ್ಲ, ಇದು ಕೊಲೆ ಇರಬಹುದು ಎಂದು ಮಾಳ ಮಾರುತಿ ಠಾಣೆಗೆ ತಾಯಿ ಉಮಾ, ಅವರ ಫೇಸ್ಬುಕ್ ಸ್ನೇಹಿತ ಮಂಗಳೂರು ಮೂಲದ ಶೋಭಿತ್ ಗೌಡ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದಾರೆ.
ಉಮಾ ಫೇಸ್ಬುಕ ಸ್ನೇಹಿತ ಶೋಭಿತ್ ಗೌಡನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದರಿಂದ ಸಂತೋಷ ಜಗಳ ಮಾಡಿದ್ದರು. ಗಂಡನ ಕೊಲೆಗೆ ಸಂಚುರೂಪಿಸಿದ ಉಮಾ ಅ. 9ರಂದು ಕುಡಿಯುವ ನೀರಿನಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟಿದ್ದು, ನಿದ್ದೆಗೆ ಜಾರಿದ ನಂತರ ತಲೆ ತುಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ಇದೆ.
ಸಂತೋಷ ಕೊಲೆ ಸಮಯದ ಸಿಸಿಟಿವಿ ಫುಟೇಟ್ ಗಳನ್ನು ಡಿಲೀಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಎದುರು ಮನೆಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಇಬ್ಬರು ಪುರುಷರು ತಡರಾತ್ರಿ ಮನೆಯಿಂದ ಹೊರ ಹೋಗಿರುವುದು ಕಂಡು ಬಂದಿದೆ. ಅವರ ವಿಚಾರಣೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.