ಜ್ವರದಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್ಕಿಗೆ ತೆರಳಿದ ವೇಳೆ ಅವರಿಗೆ ಚುಚ್ಚುಮದ್ದು ನೀಡಿದ್ದು, ಇದು ವ್ಯತಿರಿಕ್ತ ಪರಿಣಾಮ ಬೀರಿದ ಕಾರಣ ಅವರು ಮೃತಪಟ್ಟಿದ್ದರು. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದೀಗ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್ ಬಂದ್ ಮಾಡಿದ್ದಾರೆ.
ಪ್ರಕರಣದ ವಿವರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಂಗಡಿಯ ಅಮರ್ ಶೆಟ್ಟಿ ಎಂಬವರು ಆರು ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡಿ ವರ್ಷದ ಹಿಂದೆ ಬೆಂಗಳೂರಿಗೆ ಬಂದು ಹೋಟೆಲ್ ಉದ್ಯಮ ಆರಂಭಿಸಿದ್ದರು. ಆಗಸ್ಟ್ 13ರಂದು ಇವರಿಗೆ ಜ್ವರ ಕಾಣಿಸಿಕೊಂಡ ಪರಿಣಾಮ ಕೆಪಿ ಅಗ್ರಹಾರದ ನಾಲ್ಕನೇ ಕ್ರಾಸ್ ನಲ್ಲಿರುವ ಭಾಗ್ಯ ಕ್ಲಿನಿಕ್ಕಿಗೆ ಚಿಕಿತ್ಸೆಗೆ ತೆರಳಿದ್ದು ಈ ವೇಳೆ ವೈದ್ಯರು ಚುಚ್ಚುಮದ್ದು ನೀಡಿ ಮಾತ್ರೆಗಳನ್ನು ಬರೆದುಕೊಟ್ಟಿದ್ದರು.
ಅಮರ್ ಶೆಟ್ಟಿಯವರು ಮನೆಗೆ ತೆರಳಿದ ಬಳಿಕ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಊತ ಕಾಣಿಸಿಕೊಂಡು ವಿಪರೀತ ನೋವಿನಿಂದ ನರಳಿದ್ದು, ನಂತರ ಮತ್ತೊಂದು ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇಷ್ಟಾದರೂ ಸಹ ಇವರಿಗೆ ನೋವು ಕಡಿಮೆಯಾಗದ ಕಾರಣ ಕಿಮ್ಸ್ ಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 18ರಂದು ಮೃತಪಟ್ಟಿದ್ದರು.
ಅಮರ್ ಅವರ ಸಾವಿಗೆ ಭಾಗ್ಯ ಕ್ಲಿನಿಕ್ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ನೆಟ್ಟಿಗರಿಂದ ಆಗ್ರಹ ಕೇಳಿ ಬಂದಿತ್ತು. ಇದೀಗ ಸೋಮವಾರದಂದು ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗ್ಯ ಕ್ಲಿನಿಕ್ಕಿಗೆ ಬೀಗ ಮುದ್ರೆ ಜಡಿದಿದ್ದಾರೆ.