
ಬೆಂಗಳೂರು: ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಖಾಸಗಿ ಬಸ್, ಟ್ರಾವೆಲ್ ಏಜೆನ್ಸಿಗಳು ಟಿಕೆಟ್ ದರವನ್ನು ಎರಡು ಪಟ್ಟು ಏರಿಕೆ ಮಾಡುವ ಮೂಲಕ ಸುಲಿಗೆಗಿಳಿದಿವೆ.
ಇದೇ ಶನಿವಾರ ಏಪ್ರಿಲ್ 2 ರಂದು ಯುಗಾದಿ ಹಬ್ಬವಿದ್ದು, ಮಾರ್ಚ್ 30, 31 ರಂದು ಬೆಂಗಳೂರಿನಿಂದ ಭಾರಿ ಸಂಖ್ಯೆಯ ಜನ ಊರಿಗೆ ಹೊರಟಿದ್ದಾರೆ. ಕೆಎಸ್ಆರ್ಟಿಸಿ ಯಿಂದ ಹೆಚ್ಚುವರಿ ಬಸ್ ಗಳನ್ನು ಬಿಡಲಾಗಿದೆ. ಹೆಚ್ಚಿನ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯ ಜನರು ಊರಿಗೆ ಹೋಗುವುದರಿಂದ ಬಸ್ ಕೊರತೆ ಉಂಟಾಗುತ್ತದೆ.
ಇದನ್ನು ದುರುಪಯೋಗ ಮಾಡಿಕೊಂಡಿರುವ ಖಾಸಗಿ ಬಸ್ ಗಳು ಬಸ್ ದರವನ್ನು ದುಪ್ಪಟ್ಟುಗೊಳಿಸಿವೆ. ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ 699 ಇದ್ದ ಟಿಕೆಟ್ ದರ ಈಗ 1100 ರೂ.ಗೆ ಏರಿಕೆ ಮಾಡಲಾಗಿದೆ.
ಬೆಳಗಾವಿಗೆ 700 ರೂ.ನಿಂದ 1200 ರೂ., ಉಡುಪಿಗೆ 750 ರೂ.ನಿಂದ 1150 ರೂ., ಬಳ್ಳಾರಿಗೆ 500 ರಿಂದ 1000 ರೂ., ಹುಬ್ಬಳ್ಳಿಗೆ 650 ರೂ.ನಿಂದ 1100 ರೂಪಾಯಿಗೆ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.