alex Certify ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಶೇ. 25 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಶೇ. 25 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧಾರ

ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳ ಪ್ರಯಾಣ ದರವನ್ನು ಶೇ. 25 ರಷ್ಟು ಹೆಚ್ಚಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ನೆರೆಯ ಜಿಲ್ಲೆಗಳಲ್ಲಿ ಈಗಾಗಲೇ ಖಾಸಗಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವಂತೆ ಜಿಲ್ಲೆಯಲ್ಲಿಯೂ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಖಾಸಗಿ ಮತ್ತು ಕೆಎಸ್‍ಆರ್‍ಟಿಸಿ ಬಸ್‍ಗಳ ನಡುವೆ ಅನಾರೋಗ್ಯಕರ ಪೈಪೋಟಿ ತಪ್ಪಿಸಲು ಎರಡು ಕಡೆಯವರು ಸಹಕರಿಸಬೇಕು. ಸರ್ಕಾರಿ ಬಸ್ ನಿಲ್ದಾಣದ ಒಳಗೆ ಖಾಸಗಿಯವರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಅನಾರೋಗ್ಯಕರ ಪೈಪೋಟಿಯಲ್ಲಿ ತೊಡಗುವ ಬಸ್‍ಗಳನ್ನು ತಡೆದು ನಿಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಚಾರಿ ಪೊಲೀಸರಿಗೆ ನಿರ್ದೇಶನ ನೀಢುವಂತೆ ಅವರು ಸೂಚಿಸಿದರು.

ಅಟೋ ರಿಕ್ಷಾ ಪ್ರಯಾಣದ ಕನಿಷ್ಟ ದರವನ್ನು ರೂ. 40 ಕ್ಕೆ ಪರಿಷ್ಕರಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಜಿಲ್ಲೆಗಳಲ್ಲಿರುವ ಕನಿಷ್ಟ ದರ ಸೇರಿದಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಇದೇ ರೀತಿ ಶಿವಮೊಗ್ಗ ನಗರದ 20ಕಿಮೀ ವ್ಯಾಪ್ತಿಯಲ್ಲಿ ಅಟೋ ಚಾಲನೆಗೆ ಅವಕಾಶ ನೀಡಬೇಕೆಂಬ ಮನವಿ ಕುರಿತಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ. ಅದರ ಆಧಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹೊಸ ಅಟೋ ಪರವಾನಿಗೆ ಅವಕಾಶ ನೀಡಲಾಗುತ್ತಿಲ್ಲ. ಇಲೆಕ್ಟ್ರಿಕಲ್ ಅಟೋಗಳಿಗೆ ಪರವಾನಿಗೆ ಅಗತ್ಯವಿಲ್ಲ. ಆದರೆ, ಅದರ ಚಾಲಕರು ಸಹ ಸಮವಸ್ತ್ರವನ್ನು ಧರಿಸಬೇಕು. ಅಟೋ ಮೀಟರ್ ಹಾಕದಿರುವ ಬಗ್ಗೆ ಹೆಚ್ಚಿನ ದರ ವಸೂಲು ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದು, ಅದಕ್ಕೆ ಅವಕಾಶ ಮಾಡಬಾರದು. ಎಲ್ಲರೂ ಕಡ್ಡಾಯವಾಗಿ ಮೀಟರ್ ಹಾಕಿ ಅಟೋ ಚಲಾಯಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆಲವು ವಾಹನಗಳಲ್ಲಿ ಕಣ್ಣು ಕುಕ್ಕುವ ಎಲ್‍ಇಡಿ ಹೆಡ್‍ಲೈಟ್ ಅಳವಡಿಕೆಯಿಂದ ಅಪಘಾತಗಳು ಸಂಭವಿಸಿರುವ ಬಗ್ಗೆ ದೂರುಗಳು ಬಂದಿವೆ. ಅಂತಹ ವಾಹನಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಆರ್‍ಟಿಒ ಶ್ರೀಧರ್, ವಿವಿಧ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...