ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮೂರನೇ ದಿನವೂ ಮುಂದುವರೆದಿದ್ದು, ಬಸ್ ಗಳಿಲ್ಲದ ಕಾರಣ ಪ್ರಯಾಣಿಕರ ಪರದಾಟ ಮುಂದುವರೆದಿದೆ.
ಜನರಿಂದ ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಬೆಂಗಳೂರು -ದಾವಣಗೆರೆಗೆ ಪ್ರತಿದಿನ 300 ರೂಪಾಯಿ ಇದ್ದು, ಇಂದು 600 ರೂಪಾಯಿ ಆಗಿದೆ. ಹಾಸನಕ್ಕೆ 300ರಿಂದ 500 ರೂ., ಶಿವಮೊಗ್ಗಕ್ಕೆ 350 ರಿಂದ 600 ರೂಪಾಯಿಗೆ ದರ ಹೆಚ್ಚಳ ಮಾಡಲಾಗಿದೆ. ಪ್ರಯಾಣಿಕರು ಅನಿವಾರ್ಯವಾಗಿ ದುಬಾರಿ ದರ ಕೊಟ್ಟು ಪ್ರಯಾಣಿಸುವಂತಾಗಿದೆ. ಹೆಚ್ಚಿನ ಹಣ ಕೊಡಲು ಸಾಧ್ಯವಾಗದ ಪ್ರಯಾಣಿಕರು ಹಿಡಿಶಾಪ ಹಾಕತೊಡಗಿದ್ದಾರೆ.
ಸರ್ಕಾರಿ ಬಸ್ ಗಳಿಲ್ಲದೇ ಜನ ಖಾಸಗಿ ವಾಹನಗಳ ಮೊರೆಹೋಗಿದ್ದಾರೆ. ಮೈಸೂರು, ಬೆಳಗಾವಿ, ಚಿತ್ರದುರ್ಗ, ಬೀದರ್, ಕಲಬುರಗಿ, ಹಾವೇರಿ, ಚಿಕ್ಕಮಗಳೂರು, ಕೊಪ್ಪಳ, ಹುಬ್ಬಳ್ಳಿ, ತುಮಕೂರು, ಬಾಗಲಕೋಟೆ, ಗದಗ, ಬಳ್ಳಾರಿ, ರಾಮನಗರ, ದಾವಣಗೆರೆ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿವೆ.
ಖಾಸಗಿ ವಾಹನಗಳು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದು, ವಿಧಿಯಿಲ್ಲದೆ ಜನ ಹೆಚ್ಚಿನ ಹಣ ಕೊಟ್ಟು ಪ್ರಯಾಣಿಸುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ರಾಜ್ಯದಲ್ಲಿ ಬಸ್ ಸಂಚಾರವಿಲ್ಲದೆ ಪ್ರಯಾಣಿಕರ ಪರದಾಟ ಮೂರನೇ ದಿನವೂ ಮುಂದುವರಿದಿದೆ.