
ನವದೆಹಲಿ: ಬಸ್ ಚಾಲಕನೊಬ್ಬ ಬಸ್ ನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ.
ಬಸ್ ಚಾಲಕನ ನೀಚ ಕೃತ್ಯಕ್ಕೆ ಕಂಡಕ್ಟರ್ ಸಾಥ್ ನೀಡಿದ್ದು, ಬಸ್ ನಲ್ಲಿ ಬೇರೆ ಪ್ರಯಾಣಿಕರು ಬಾರದಂತೆ ಬಸ್ ಬಾಗಿಲಿನಲ್ಲಿ ಕಾವಲು ನಿಂತಿದ್ದ ಎಂಬ ಆರೋಪ ಕೇಳಿಬಂದಿದೆ.
ಮಹಿಳೆ ಫ್ಲ್ಯಾಟ್ ಗಳಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಸೆಕ್ಟರ್ 17ರ ಬೈಪಾಸ್ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆಕೆಯ ಬಳಿ ಖಾಸಗಿ ಬಸ್ ವೊಂದು ಬಂದು ನಿಂತಿದೆ. ಗಡಿಬಿಡಿಯಲ್ಲಿ ಮಹಿಳೆ ಬಸ್ ಹತ್ತಿದ್ದಾಳೆ. ಬಸ್ ಹತ್ತಿ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಇಡೀ ಬಸ್ ನಲ್ಲಿ ತಾನೊಬ್ಬಳೇ ಇರುವುದನ್ನು ಕಂಡು ಗಾಬರಿಯಾಗಿದ್ದಾಳೆ. ಈ ವೇಳೆ ಮಹಿಳೆ ಕಂಡಕ್ಟರ್ ನನ್ನು ಬಸ್ ನಲ್ಲಿ ಬೇರೆ ಪ್ರಯಾಣಿಕರಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆತ ಮುಂದಿನ ನಿಲ್ದಾಣದಲ್ಲಿ ಪ್ರಯಾಣಿಕರು ಹತ್ತುತ್ತಾರೆ ಎಂದಿದ್ದಾನೆ.
ಬಸ್ ನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ ಚಾಲಕ, ಮಹಿಳೆ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದಾನೆ. ಪೊಲೀಸರಿಗೆ ಮಾಹಿತಿ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬೆದರಿಕೆ ಹಾಕಿದ್ದಾನೆ.
ಘಟನೆ ಬಳಿಕ ಮಹಿಳೆ ಸೆಕ್ಟರ್ 17ರಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಬಸ್ ಚಾಲಕ ಹಾಗೂ ಕಂಡಕ್ಟರ್ ಇಬ್ಬರನ್ನು ಬಂಧಿಸಲಾಗಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.