ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈವರೆಗೆ ತಾಪಮಾನ ಹೆಚ್ಚಳದಿಂದ ರಣಬಿಸಿಲಿಗೆ ಜನರು ಕಂಗೆಟ್ಟು ಹೋಗಿದ್ದರು. ಇದೀಗ ದೆಹಲಿಯಾದ್ಯಂತ ಏಕಾಏಕಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದೆ.
ಮಹಾಮಳೆಯಿಂದಾಗಿ ರಾಷ್ಟ್ರ ರಾಜಧಾನಿ ನಡುಗಡ್ಡೆಯಂತಾಗಿದ್ದು, ಪ್ರಯಾಣಿಕರ ಬಸ್ ವೊಂದು ಅಂಡರ್ ಪಾಸ್ ನಲ್ಲಿ ಸಿಲುಕಿಕೊಂಡಿದೆ. ನೀರಿನಲ್ಲಿ ಸಿಲುಕಿರುವ ಬಸ್ ನ್ನು ಹೊರತೆಗೆಯಲಾಗದೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಬಸ್ ನಲ್ಲಿದ್ದ ಪ್ರಯಾಣಿಕರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ ಘಟನೆ ನಡೆದಿದೆ.
ದೆಹಲಿಯ ಬಹುತೇಕ ರಸ್ತೆಗಳು ಜಲಾವೃತಾಗೊಂಡಿವೆ. ಮನೆ ಮುಂದೆ ನಿಂತಿದ್ದ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಮಿಂಟೋ ರಸ್ತೆಯಲ್ಲಿ ಕಾರೊಂದು ಮುಳುಗಡೆಯಾಗಿದ್ದು, ಅವಾಂತರ ಸೃಷ್ಟಿಯಾಗಿದೆ.
ದೆಹಲಿಯ ಎನ್ ಸಿಆರ್, ಮಿಂಟೋ ರಸ್ತೆ, ಗೋವಿಂದಪುರಿಯಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.