ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯುವುದು ಸಾಹಸದ ಕೆಲಸವಾಗಿದೆ. ಈ ಹಿಂದೆ ಸರಳವಾಗಿ ಬಸ್ ಪಾಸ್ ಪಡೆಯಬಹುದಾಗಿತ್ತು. ಈಗ ಹೊಸ ವ್ಯವಸ್ಥೆಯಿಂದಾಗಿ ಬಸ್ ಪಡೆಯುವುದು ಗೊಂದಲದ ಗೂಡಾಗಿದೆ.
ಸೇವಾ ಸಿಂಧು ಪೋರ್ಟಲ್ ನಲ್ಲಿ ತಾಂತ್ರಿಕ ತೊಂದರೆ ಇದ್ದು ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆ ಎದುರಾಗಿದೆ. ಅರ್ಜಿ ಸಲ್ಲಿಸಲು ಸೈಬರ್ ಕೆಫೆಗಳಲ್ಲಿ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯುವಂತಾಗಿದೆ. ಮಾರ್ಚ್ 1 ರಿಂದ ವಿದ್ಯಾರ್ಥಿಗಳು ಹೊಸ ಬಸ್ ಪಾಸ್ ಪಡೆದು ಸಂಚರಿಸಬೇಕಿರುವುದರಿಂದ ಬಸ್ ಪಾಸ್ ಪಡೆಯುವುದೇ ಸಮಸ್ಯೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳಿಗೆ ಮಾರ್ಚ್ ನಿಂದ ಬಸ್ ಪಾಸ್ ನೀಡಿದರೂ 2020ರ ನವಂಬರ್ ನಿಂದ ಪೂರ್ವಾನ್ವಯವಾಗುವಂತೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಆನ್ ಲೈನ್ ಅರ್ಜಿ ಸಲ್ಲಿಸಲು ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಕೈಬಿಟ್ಟು ಹಿಂದಿನಂತೆ ಭೌತಿಕವಾಗಿ ಅರ್ಜಿ ಪಡೆದು ಬಸ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳಲು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.