ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೊರಟ ಬಸ್ ಪ್ರಯಾಣಿಕರಿಂದ ಖಾಸಗಿ ಬಸ್ ಗಳು ಸುಲಿಗೆಗೆ ಇಳಿದಿವೆ. ಟಿಕೆಟ್ ದರವನ್ನು ಎರಡರಿಂದ ಮೂರು ಪಟ್ಟು ಏರಿಕೆ ಮಾಡಿವೆ.
ಸಾಮಾನ್ಯವಾಗಿ ಹಬ್ಬದ ಹಿಂದಿನ ಎರಡು ದಿನಗಳಲ್ಲಿ ದರ ಹೆಚ್ಚಿಸುತ್ತಿದ್ದ ಖಾಸಗಿ ಬಸ್ ಗಳು ಈಗ ನಾಲ್ಕು ದಿನ ಮೊದಲೇ ದರ ಹೆಚ್ಚಳ ಮಾಡಿವೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ 750 ರಿಂದ 850 ರೂ. ದರ ಇದ್ದು, ಈಗ 1500 ನಿಂದ 2,000 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಶಿವಮೊಗ್ಗಕ್ಕೆ 400 ರಿಂದ 700 ರೂ. ಇದ್ದು, ಈಗ 900 ರಿಂದ 1400 ರೂ. ವರೆಗೆ ಹೆಚ್ಚಳ ಮಾಡಲಾಗಿದೆ. ಬೀದರ್ 650 ರಿಂದ 900 ರೂ. ಇದ್ದು, 1,200 ನಿಂದ 1800 ರೂ.ವರೆಗೆ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೋನಾ ಇದ್ದ ಕಾರಣ ಹಬ್ಬದ ಸಂಭ್ರಮ ಕಂಡು ಬಂದಿರಲಿಲ್ಲ. ಈ ಬಾರಿ ಎಲ್ಲರೂ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಊರಿಗೆ ಹೊರಟಿದ್ದಾರೆ. ಇದೇ ಸಂದರ್ಭ ಬಳಸಿಕೊಂಡು ಖಾಸಗಿ ಬಸ್ ಗಳು ದುಬಾರಿ ದರ ವಿಧಿಸುತ್ತಿವೆ. ಟಿಕೆಟ್ ದರವನ್ನು 2 -3 ಪಟ್ಟು ಹೆಚ್ಚಳ ಮಾಡಿವೆ. ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲವೆಂದು ಬಸ್ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.