ಜತ್ತ: ಮದುವೆಗೆಂದು ಹೊರಟಿದ್ದ ವೇಳೆ ಖಾಸಗಿ ಬಸ್ ಹಾಗೂ ಕ್ರೂಸರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಜತ್ತ ಬಳಿಯ ನಾಗಾಸಪಾಟಾ ಬಳಿ ನಡೆದಿದೆ.
ಖಾಸಗಿ ಬಸ್ ಹಾಗು ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿದ್ದು, ಕ್ರೂಸರ್ ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ 10 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಭಾಗ್ಯಶ್ರೀ (18) ನಿವೇದಿತಾ (17), ಉಜ್ವಲಾ ಶಿಂಧೆ (19) ಹಾಗೂ ವಿಜಯಪುರ ಜಿಲ್ಲೆಯ ಅನಸೂಯಾ ಮೋರೆ (56) ಎಂದು ಗುರುತಿಸಲಾಗಿದೆ.
ಮದುವೆಗೆಂದು ಮಹಾರಾಷ್ಟ್ರಕ್ಕೆ ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.