
ತಿರುವನಂತಪುರಂ: ಕಾಲೇಜು ಪ್ರವಾಸದ ಬಸ್ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಕೇರಳದ ಮುನ್ನಾರ್ ನಲ್ಲಿ ನಡೆದಿದೆ.
ತಮಿಳುನಾಡಿನ ನಾಗರ್ ಕೊಯಿಲ್ ನ ಸ್ಕಾಟ್ ಕ್ರಿಶ್ಚಿಯನ್ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರಸಿದ್ಧ ಪ್ರವಾಸಿ ತಾಣ ಎಕೋ ಪಾಯಿಂಟ್ ಬಳಿ ಬಸ್ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ವೆನಿಕಾ, ಅತಿಕಾ.ಆರ್ ಹಾಗೂ ಸುಧನ್ ಮೃತ ವಿದ್ಯಾರ್ಥಿಗಳು. ಮೃತರು ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ. ಕುಂಡಲ ಅಣೆಕಟ್ಟಿನ ಕಡೆಗೆ ಬಸ್ ತೆರಳುತ್ತಿದ್ದಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.
ಅಪಘಾತದಲ್ಲಿ ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 19 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮುನ್ನಾರ್ ನ ಟಾಟಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.