ವೆಲ್ಲೂರು: ಜನಪ್ರಿಯ ಆಭರಣ ಮಳಿಗೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 8 ಕೋಟಿ ರೂ. ಮೌಲ್ಯದ 15 ಕೆ.ಜಿ ಚಿನ್ನಾಭರಣ ಹಾಗೂ 500 ಗ್ರಾಂ ವಜ್ರಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿ ಈ ಘಟನೆ ನಡೆದಿದೆ.
ಕಟಪಾಡಿ ರಸ್ತೆಯಲ್ಲಿರುವ ಜನಪ್ರಿಯ ಜೋಸ್ ಅಲುಕ್ಕಾಸ್ ಶೋರೂಮ್‌ಗೆ ರಂಧ್ರ ಕೊರೆದ ದುಷ್ಕರ್ಮಿಗಳು, ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಶೋರೂಂ ಪಕ್ಕದಲ್ಲಿರುವ ಖಾಲಿ ಫ್ಲಾಟ್‌ನಿಂದ ಅಥವಾ ಟೆರೇಸ್ ನಿಂದ ಪ್ರವೇಶಿಸಿರುವ ಶಂಕೆಯಿದೆ. ದುಷ್ಕರ್ಮಿಗಳು ಕಪ್ಪು ಮುಖವಾಡಗಳನ್ನು ಧರಿಸಿ, ಶೋರೂಮ್‌ನಲ್ಲಿ ಇರಿಸಲಾಗಿದ್ದ ಎಲ್ಲಾ 12 ಸಿಸಿ ಟಿವಿ ಕ್ಯಾಮರಾಗಳಿಗೆ ಸ್ಪ್ರೇ ಪೇಂಟ್ ಮಾಡಿ, ಈ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸುಳಿವಿಗಾಗಿ ಅಕ್ಕಪಕ್ಕದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಡಿಐಜಿ (ವೆಲ್ಲೂರು ವ್ಯಾಪ್ತಿ) ಎಜಿ ಬಾಬು, ಎಸ್ಪಿ ಎಸ್. ರಾಜೇಶ್ ಕಣ್ಣನ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಕಳ್ಳತನದ ತನಿಖೆಗಾಗಿ ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ.
ಅಂಗಡಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಳ್ಳರು ಸೆರೆಯಾಗಿದ್ದಾರೆ. ಆದರೆ ಇದು ವ್ಯಕ್ತಿಯೋ ಅಥವಾ ಗ್ಯಾಂಗ್ ಆಗಿದೆಯೋ ಎಂದು ಹೇಳಲು ಸಾಧ್ಯವಿಲ್ಲ. ಈಗಾಗಲೇ ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಕೆಲವು ಸುಳಿವುಗಳನ್ನು ಕೂಡ ಸಂಗ್ರಹಿಸಲಾಗಿದೆ ಎಂದು ಎಸ್ಪಿ ಎಸ್ ರಾಜೇಶ್ ಕಣ್ಣನ್ ಹೇಳಿದ್ದಾರೆ.
ಶೋರೂಮ್ ಸಿಬ್ಬಂದಿಗಳನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ. ಫೊರೆನ್ಸಿಕ್ ತಂಡಗಳು ಶೋರೂಮ್‌ನಿಂದ ಬೆರಳಚ್ಚುಗಳನ್ನು ತೆಗೆದುಕೊಂಡಿದ್ದು, ಸಿಬ್ಬಂದಿಯ ಪ್ರಿಂಟ್‌ಗಳೊಂದಿಗೆ ಅವುಗಳನ್ನು ಪರಿಶೀಲಿಸಿವೆ.