ವಾರದ ಹಿಂದೆ ತಮಿಳುನಾಡಿನ ರಾಣಿಪೇಟ್ ಸಮೀಪದ ಲಾಲಾಪೇಟ್ನಲ್ಲಿರುವ ಶಿವ ದೇವಾಲಯದ ಹುಂಡಿಯಿಂದ ಹಣವನ್ನು ಕದ್ದ ಕಳ್ಳನೊಬ್ಬ, ಅಚ್ಚರಿ ಎಂಬಂತೆ ಹಿಂದಿರುಗಿಸಿದ್ದಾನೆ. ಜೊತೆಗೆ ತನ್ನ ಕೃತ್ಯಕ್ಕೆ ಕ್ಷಮೆ ಕೋರಿ ಕ್ಷಮಾಪಣಾ ಪತ್ರವನ್ನೂ ದೇವರ ಮುಂದೆ ಇಟ್ಟಿದ್ದಾನೆ.
ಹುಂಡಿ ಒಡೆದು ಹಣ ನಾಪತ್ತೆಯಾಗಿರುವ ಬಗ್ಗೆ ಗ್ರಾಮ ಹಾಗೂ ಶಿವ ದೇವಸ್ಥಾನದ ಅಧಿಕಾರಿಗಳು ವಾರದ ಹಿಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಎಫ್ಐಆರ್ ನಂತರ ಪೊಲೀಸರು ತನಿಖೆಗಾಗಿ ಕೆಲವು ದಿನಗಳ ಕಾಲ ದೇವಾಲಯವನ್ನು ಮುಚ್ಚಿದ್ದರು. ದರೋಡೆಕೋರನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಪುನಃ ಸಾರ್ವಜನಿಕ ದರ್ಶನಕ್ಕಾಗಿ ದೇವಾಲಯವನ್ನು ತೆರೆಯಲಾಗಿತ್ತು.
ಮಂಗಳವಾರ ಸಂಜೆ ವಾಡಿಕೆಯಂತೆ ಶಿವ ದೇವಾಲಯದ ಅಧಿಕಾರಿಗಳು ಹುಂಡಿಯನ್ನು ತೆರೆದಾಗ ಅಚ್ಚರಿ ಕಾದಿತ್ತು. ಕಾಣಿಕೆ ಎಣಿಕೆ ಮಾಡುವಾಗ ಕೈ ಬರಹದಿಂದ ಅಚ್ಚುಕಟ್ಟಾಗಿ ಸುತ್ತಿ ಹಾಕಲಾಗಿದ್ದ 500 ರೂಪಾಯಿ ಮುಖಬೆಲೆಯ ಇಪ್ಪತ್ತು ನೋಟುಗಳು ಕಂಡು ಬಂದಿತ್ತು.
ಹುಣ್ಣಿಮೆಯಂದು, ಅಂದರೆ ಜೂನ್ 14 ರಂದು ದೇವಸ್ಥಾನದಿಂದ ಹಣವನ್ನು ಕದ್ದಿರುವುದಾಗಿ ಕಳ್ಳನು ಕ್ಷಮೆಯಾಚನೆ ಪತ್ರದಲ್ಲಿ ವಿವರಿಸಿದ್ದ.
ಈ ದೇವಾಲಯದಲ್ಲಿ ಪೌರ್ಣಮಿಯಂದು ಪಟ್ಟಣದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಅದೇ ದಿನ ಉತ್ತಮ ಸಂಗ್ರಹವಾಗುವ ನಿರೀಕ್ಷೆಯಲ್ಲಿ ಕಳ್ಳ ಹುಂಡಿ ಒಡೆದಿದ್ದಾನೆ. ಈ ಸಂಗತಿಯನ್ನೂ ಪತ್ರದಲ್ಲಿ ತಿಳಿಸಿದ್ದಾನೆ.
ಕಳ್ಳತನ ಮಾಡಿದ ನಂತರ ತನ್ನ ಮನಃಶಾಂತಿಯನ್ನು ಕಳೆದುಕೊಂಡು, ಕುಟುಂಬವು ಅಸಂಖ್ಯಾತ ಸಮಸ್ಯೆ ಎದುರಿಸಿದೆ ಎಂದು ಆತ ಪತ್ರದಲ್ಲಿ ವಿವರಿಸಿದ್ದಾನೆ.