ವಾಷಿಂಗ್ಟನ್: ಒಂದೇ ಒಂದು ದಿನವೂ ರಜೆ ತೆಗೆದುಕೊಳ್ಳದೇ 27 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದ ವ್ಯಕ್ತಿಗೆ ನಿವೃತ್ತಿ ಬಳಿಕ ಬರೋಬ್ಬರಿ 3.5 ಕೋಟಿ ರೂಪಾಯಿ ಬಂಪರ್ ಕೊಡುಗೆ ಸಿಕ್ಕಿದೆ. ಆದರೆ ಕಂಪನಿಯಿಂದಲ್ಲ ಎಂಬುದು ಮಹತ್ವದ ವಿಚಾರ. ಹಾಗಾದರೆ ಅಷ್ಟೊಂದು ಭಾರೀ ಗಿಫ್ಟ್ ಸಿಕ್ಕಿದ್ದು ಹೇಗೆ? ಇಲ್ಲಿದೆ ಮಾಹಿತಿ.
ಅಮೆರಿಕಾದ ಬರ್ಗರ್ ಕಿಂಗ್ ಕಂಪನಿ ಉದ್ಯೋಗಿ ಕೆವಿನ್ ಫೋರ್ಡ್, ಸತತ 27 ವರ್ಷಗಳ ಕಾಲ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದರು. ಆದರೆ ನಿವೃತ್ತಿ ಸಂದರ್ಭದಲ್ಲಿ ಕಂಪನಿ ಅವರಿಗೆ ಕೊಟ್ಟಿದ್ದು ಕೇವಲ ಸಣ್ಣಪುಟ್ಟ ಬಹುಮಾನ. ತನ್ನ ಅತ್ಯಮೂಲ್ಯ ಸೇವೆಗಾಗಿ ಕಂಪನಿಯಿಂದ ಭಾರೀ ಕೊಡುಗೆ ನಿರೀಕ್ಷಿಸಿದ್ದ ಕೆವಿನ್ ಫೋರ್ಡ್ ಗೆ ನಿರಾಸೆಯಾಯಿತು. ರಜೆ ಇಲ್ಲದೇ ಕೆಲಸ ಮಾಡಿದರೂ ಕಂಪನಿ ಸಾಮಾನ್ಯ ಉಡುಗೊರೆ ಕೊಟ್ಟು ಕೈ ತೊಳೆದುಕೊಂಡಿತಲ್ಲ ಎಂಬ ನೋವಿನಲ್ಲಿದ್ದರು.
ತಂದೆಯ ಕರ್ತವ್ಯ ನಿಷ್ಠೆಗೆ ಕಂಪನಿ ನಡೆದುಕೊಂಡ ರೀತಿಗೆ ಬೇಸರಗೊಂಡ ಮಗಳು ಸೆರಿನಾ, ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ತಂದೆಯ ಶ್ರಮ, ನಿಷ್ಠೆ ಬಗ್ಗೆ ಅಪ್ ಲೋಡ್ ಮಾಡಿದ್ದಳು. 27 ವರ್ಷಗಳ ಕಾಲ ನಿರಂತರವಾಗಿ ದುಡಿದ ತಂದೆಗೆ ಅರ್ಹ ಬಹುಮಾನ ಸಿಗಬೇಕು ಎಂದು GoFundMe ಎಂಬ ಅಭಿಯಾನವನ್ನು ಆರಂಭಿಸಿದಳು.
ಈ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಿಶ್ವಾದ್ಯಂತ ಜನರು ದೇಣಿಗೆ ರೀತಿಯಲ್ಲಿ ಹಣ ಸಂದಾಯ ಮಾಡಿದರು, ಇದರಿಂದಾಗಿ 4,18,000 ಡಾಲರ್ ಹಣ ಸಂಗ್ರಹವಾಯಿತು. ಅಂದರೆ 3.48 ಕೋಟಿಗೂ ಹೆಚ್ಚು ಹಣ ಹರಿದು ಬಂದಿದೆ.